June 5, 2026
Friday, June 5, 2026
spot_img

ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ ಪತ್ನಿ ಬಲಿ

ಹೊಸದಿಗಂತ ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ತೋಟದ ಕೆಲಸ ವೀಕ್ಷಿಸಲು ತೆರಳಿದ್ದ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿ ಆನೆ ದಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಕೋಣನಕಟ್ಟೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ದುರಂತದ ವಿವರ:

ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಧರ್ಮಪತ್ನಿ ಸಂಧ್ಯಾ (60) ಕಾಡಾನೆ ದಾಳಿಯಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಶುಕ್ರವಾರ ಮುಂಜಾನೆ ಸುಮಾರು 9 ಗಂಟೆಯ ವೇಳೆಗೆ ಸಂಧ್ಯಾ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲ್ವಿಚಾರಣೆ ನಡೆಸಲು ತೆರಳಿದ್ದರು. ಈ ಸಂದರ್ಭದಲ್ಲಿ ಕಾಫಿ ತೋಟದ ಮಧ್ಯದಿಂದ ಹಠಾತ್ತನೆ ಪ್ರತ್ಯಕ್ಷವಾದ ಕಾಡಾನೆಯೊಂದು ಇವರ ಮೇಲೆ ತೀವ್ರವಾಗಿ ದಾಳಿ ಮಾಡಿದೆ.

ಆಸ್ಪತ್ರೆಗೆ ಸಾಗಿಸುವಾಗ ಸಾವು:

ಆನೆಯ ಭೀಕರ ದಾಳಿಯಿಂದಾಗಿ ಸಂಧ್ಯಾ ಅವರು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಹಾಗೂ ಕುಟುಂಬಸ್ಥರು ಅವರನ್ನು ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಪಾಸಣೆ ನಡೆಸಿ ದೃಢಪಡಿಸಿದ್ದಾರೆ.

ಇಬ್ಬರು ಕಾರ್ಮಿಕರಿಗೆ ಗಾಯ:

ಇದೇ ಸಂದರ್ಭದಲ್ಲಿ ತೋಟದ ಕೆಲಸದಲ್ಲಿ ನಿರತರಾಗಿದ್ದ ತಿತಿಮತಿ ಮೂಲದ ಇಬ್ಬರು ಕಾರ್ಮಿಕರ ಮೇಲೂ ಆನೆ ದಾಳಿ ನಡೆಸಿದೆ. ಸದ್ಯ ಗಾಯಗೊಂಡಿರುವ ಇಬ್ಬರೂ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !