September 26, 2026
Saturday, September 26, 2026
spot_img

ರಾಮ ಮಂದಿರದ ಕಾಣಿಕೆಗೆ ಕನ್ನ: 105 ಬಾರಿ ಹಣ ಲೂಟಿ ಮಾಡಿದ್ದು ಸಿಸಿಟಿವಿಯಲ್ಲಿ ಪತ್ತೆ; ಎಸ್‌ಐಟಿಯಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾಣಿಕೆ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಹಣ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದ ಸಮಯದಲ್ಲಿ ಆರೋಪಿಗಳು ಭಕ್ತರು ನೀಡಿದ ಕಾಣಿಕೆ ಹಣವನ್ನು ಲೂಟಿ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಸಾಬೀತಾಗಿದೆ.

ಮುಖ್ಯ ಆರೋಪಿಯಾದ ಅವಿನಾಶ್ ಶುಕ್ಲಾ ಎಂಬಾತ ಒಂದಲ್ಲ ಎರಡಲ್ಲ, ಬರೋಬ್ಬರಿ 85 ಬಾರಿ ಕಾಣಿಕೆ ಹಣವನ್ನು ಕದ್ದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಯಾರ ಪಾತ್ರ ಏನು?

ಈ ಇಡೀ ಹಗರಣದ ತನಿಖೆ ನಡೆಸಿರುವ ಎಸ್‌ಐಟಿ, ಒಟ್ಟು 8 ಮಂದಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದೆ. ಇದಕ್ಕಾಗಿ ಸಿಸಿಟಿವಿ ದೃಶ್ಯಗಳು, ಆರೋಪಿಗಳ ಮೊಬೈಲ್ ಚಾಟ್‌ಗಳು ಮತ್ತು ಕಾಲ್ ಡಿಟೇಲ್ ರೆಕಾರ್ಡ್ಸ್ ಅನ್ನು ಪ್ರಮುಖ ಸಾಕ್ಷ್ಯಗಳಾಗಿ ಬಳಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿಗಳಾದ ಅವಿನಾಶ್ ಶುಕ್ಲಾ 85 ಬಾರಿ ನೇರವಾಗಿ ಹಣವನ್ನು ಲೂಟಿ ಮಾಡಿದ್ದಾನೆ. ಕರುಣೇಶ್ ಪಾಂಡೆ 2 ಬಾರಿ ನೇರವಾಗಿ ಹಣ ಕದ್ದಿದ್ದು, ಬರೋಬ್ಬರಿ 68 ಬಾರಿ ಇತರರು ಕಳ್ಳತನ ಮಾಡಲು ಸಹಾಯ ಮಾಡಿದ್ದಾನೆ. ಮನೀಶ್ ಕುಮಾರ್ ಯಾದವ್ 16 ಬಾರಿ ಸ್ವತಃ ಕಳ್ಳತನ ಮಾಡಿದ್ದು, 19 ಬಾರಿ ಕಳ್ಳತನಕ್ಕೆ ಸಾಥ್ ನೀಡಿದ್ದಾನೆ. ಲವಕುಶ್ ಮಿಶ್ರಾ ಮತ್ತು ಅನುಕಲ್ಪ್ ಮಿಶ್ರಾ ಲವಕುಶ್ 1 ಬಾರಿ ಕದ್ದು, 52 ಬಾರಿ ಸಹಾಯ ಮಾಡಿದ್ದರೆ, ಅನುಕಲ್ಪ್ 56 ಬಾರಿ ಕಳ್ಳತನಕ್ಕೆ ನೆರವಾಗಿದ್ದಾನೆ ಹಾಗೂ ರಾಮಶಂಕರ್ ಮಿಶ್ರಾಬ್ಯಾಂಕ್‌ನಲ್ಲಿದ್ದ ಅನುಭವವನ್ನಿಟ್ಟುಕೊಂಡು ಈತ ಒಮ್ಮೆ ನೇರವಾಗಿ ಕಾಣಿಕೆ ಹಣವನ್ನು ಜೇಬಿಗೆ ಇಳಿಸಿಕೊಂಡಿರುವುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿಗೆ ಒಳಗಾಗಿರುವ ಇತರ ಇಬ್ಬರು ಆರೋಪಿಗಳೆಂದರೆ ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಅಲಿಯಾಸ್ ತಿನ್ನು.

ಟ್ರಸ್ಟ್‌ನ ಪ್ರಮುಖರು ಸೇರಿ 98 ಮಂದಿ ಸಾಕ್ಷಿಗಳು

ಈ ದೊಡ್ಡ ಮಟ್ಟದ ವಂಚನೆ ಪ್ರಕರಣದಲ್ಲಿ ಬಲವಾದ ಸಾಕ್ಷ್ಯಗಳನ್ನು ಕಲೆಹಾಕಲು ತನಿಖಾಧಿಕಾರಿಗಳು 98 ಜನರನ್ನು ಸಾಕ್ಷಿಗಳನ್ನಾಗಿ ಹೆಸರಿಸಿದ್ದಾರೆ. ಇದರಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಂದಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ಜಿ ಅವರಂತಹ ಪ್ರಮುಖರ ಹೆಸರುಗಳೂ ಸೇರಿವೆ.

ಪ್ರಕರಣದ ಹಿನ್ನೆಲೆ

ರಾಮ ಮಂದಿರಕ್ಕೆ ಭಕ್ತರು ನೀಡುವ ದೇಣಿಗೆ ಮತ್ತು ಕಾಣಿಕೆ ಹಣವನ್ನು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಜೂನ್ 25 ರಂದು ಟ್ರಸ್ಟ್‌ನ ಸದಸ್ಯ ಕೃಷ್ಣಮೋಹನ್ ಅವರು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮತ್ತು ಎಸ್‌ಐಟಿ ತಂಡವು, ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ಹೆಡೆಮುರಿ ಕಟ್ಟಿದ್ದು, ಈಗ ನ್ಯಾಯಾಲಯಕ್ಕೆ ವರದಿ ಒಪ್ಪಿಸಿದೆ.

Must Read