ಹೊಸದಿಗಂತ ವರದಿ ತುಮಕೂರು:
ತುರುವೇಕೆರೆ ತಾಲೂಕಿನ ಮಲ್ಲಘಟ್ಟ ಸುತ್ತಮುತ್ತ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ತುಮಕೂರು ಜಿಲ್ಲೆಗೆ ಭೇಟಿ ನೀಡಿದ ಅವರು, ಮಲ್ಲಘಟ್ಟದ ಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರೈತರು, ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಕಾಲುವೆ ವ್ಯವಸ್ಥೆ, ಸಮುದಾಯಭವನ, ಅತಿಥಿ ಗೃಹ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುವುದಾಗಿ ಹೇಳಿದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಈ ಪವಿತ್ರ ಸನ್ನಿಧಿಗೆ ಭೇಟಿ ನೀಡಿದ್ದು, ಗಂಗಾಧರೇಶ್ವರ ದೇವಾಲಯ ಹಾಗೂ ಮಲ್ಲಘಟ್ಟ ಕೆರೆ ತಮಗೆ ವಿಶೇಷ ಭಾವನಾತ್ಮಕ ನಂಟು ಹೊಂದಿರುವ ಸ್ಥಳಗಳು. ಈ ಕೆರೆಗೆ ಈ ಹಿಂದೆ ಮೂರು-ನಾಲ್ಕು ಬಾರಿ ಭೇಟಿ ನೀಡಿದ್ದು, ಇದು ಐತಿಹಾಸಿಕ ಹಾಗೂ ಪವಿತ್ರ ಕ್ಷೇತ್ರವಾಗಿದೆ ಎಂದರು.
ಇಲ್ಲಿನ ನೀರನ್ನು ತಮ್ಮ ಮನೆಯ ಗೃಹಪ್ರವೇಶದ ಸಂದರ್ಭದಲ್ಲೂ ತೆಗೆದುಕೊಂಡು ಹೋಗಿದ್ದಾಗಿ ಅವರು ಹೇಳಿದರು. ಮಲ್ಲಘಟ್ಟ ಕೆರೆ ಸದಾ ತುಂಬಿ ತುಳುಕುತ್ತಿರುತ್ತದೆ. ಸುಮಾರು 25 ವರ್ಷಗಳಿಂದ ಈ ಪ್ರದೇಶವನ್ನು ಗಮನಿಸಿದ್ದು, ಇಲ್ಲಿಗೆ ಬಂದಾಗ ತಮಗೆ ಸಂತೋಷ ಹಾಗೂ ನೆಮ್ಮದಿ ಸಿಗುತ್ತದೆ,” ಎಂದರು.
ಇದನ್ನೂ ಓದಿ:
“ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಾಡುಸಿದ್ದೇಶ್ವರ ಮಠದವರೊಂದಿಗೆ ಚರ್ಚೆ ನಡೆಸಿದ್ದೇನೆ. ಅಭಿವೃದ್ಧಿಗೆ ಏನು ಬೇಕು ಎಂದು ಸ್ಥಳೀಯರು ಹಾಗೂ ಮಠದವರ ಸಲಹೆ ಪಡೆದು ಅಗತ್ಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
ಪ್ರಮಾಣವಚನ ಸ್ವೀಕಾರ ವೇಳೆ ಹಿಂದೂ ಸಂಪ್ರದಾಯ ಅನುಸರಿಸಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣಕ್ಕಿಂತ ಭಕ್ತಿ ಮುಖ್ಯ. ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ ವೈಯಕ್ತಿಕವಾದದ್ದು, ಪ್ರಮಾಣವಚನ ಕಾರ್ಯಕ್ರಮಕ್ಕೆ ಹಿಂದೂ, ಕ್ರೈಸ್ತ, ಸಿಖ್, ಬೌದ್ಧ ಸೇರಿದಂತೆ ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿತ್ತು ಎಂದರು.
ರಾಜ್ಯದ ಹಿತ ಕಾಪಾಡುವ ಜವಾಬ್ದಾರಿ ತಮ್ಮ ಮೇಲಿದ್ದು, ಎಲ್ಲ ಧರ್ಮಗಳ ಆಶೀರ್ವಾದ ಪಡೆಯುವ ಉದ್ದೇಶದಿಂದ ಆ ರೀತಿಯ ಕಾರ್ಯಕ್ರಮ ನಡೆಸಲಾಗಿತ್ತು ಎಂದು ಸ್ಪಷ್ಟಪಡಿಸಿದರು. ಮಲ್ಲಘಟ್ಟದ ಗಂಗಾಧರೇಶ್ವರನಿಗೆ ಹರಕೆ ಹೊತ್ತಿದ್ದೀರಾ ಎಂಬ ಪ್ರಶ್ನೆಗೆ, “ಯಾವುದೇ ಹರಕೆ ಇಲ್ಲ. ಇದು ನನ್ನ ಭಕ್ತಿ ಮತ್ತು ಭಾವನೆ. ಜನರ ಕಲ್ಯಾಣ, ರಾಜ್ಯದ ಸುಭಿಕ್ಷತೆ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ನನಗೆ ದೊರೆತಿರುವ ಅಧಿಕಾರವನ್ನು ಜನಸೇವೆಗೆ ಮುಡಿಪಾಗಿಟ್ಟಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ಷಡಕ್ಷರಿ, ಎಂ.ಟಿ ಕೃಷ್ಣಪ್ಪ ಮತ್ತಿತರ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.



