ಹೊಸದಿಗಂತ ಡಿಜಿಡಲ್ ಡೆಸ್ಕ್:
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಇಂದು ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರವಾದ ಕನಕಪುರಕ್ಕೆ ಅಧಿಕೃತ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮುಖ್ಯಮಂತ್ರಿಗಳಿಗೆ ಅದ್ಧೂರಿ ಸ್ವಾಗತ ಕೋರಲು ಬೆಂಬಲಿಗರು ಹಾಗೂ ಸಾರ್ವಜನಿಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಮೆಟ್ರೋದಲ್ಲಿ ಸಿಎಂ ಸಂಚಾರ – ಕಾರಣವೇನು?:
ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಸಂಚರಿಸುವಾಗ ಜೀರೋ ಟ್ರಾಫಿಕ್ ವ್ಯವಸ್ಥೆ ಇರುತ್ತದೆ. ಆದರೆ, ಭಾನುವಾರದ ರಜಾದಿನವಾದ್ದರಿಂದ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಸಂಚಾರ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಿಎಂ ಡಿ.ಕೆ. ಶಿವಕುಮಾರ್ ನಮ್ಮ ಮೆಟ್ರೋ ಮೂಲಕ ಪ್ರಯಾಣಿಸಲು ನಿರ್ಧರಿಸಿದ್ದಾರೆ. ಬೆಂಗಳೂರಿನ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದವರೆಗೆ ಅವರು ಮೆಟ್ರೋ ರೈಲಿನಲ್ಲಿ ಸಂಚರಿಸಲಿದ್ದು, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಕನಕಪುರಕ್ಕೆ ತೆರಳಲಿದ್ದಾರೆ.
ಇದನ್ನೂ ಓದಿ:
ಸ್ವಕ್ಷೇತ್ರದಲ್ಲಿ ಮೆಗಾ ರೋಡ್ ಶೋ ಹಾಗೂ ಕೃತಜ್ಞತಾ ಸಭೆ:
ಕನಕಪುರ ತಲುಪಿದ ನಂತರ ಮುಖ್ಯಮಂತ್ರಿಗಳಿಗೆ ಸಾರ್ವಜನಿಕರು ಹಾಗೂ ಅಭಿಮಾನಿಗಳಿಂದ ಬೃಹತ್ ರೋಡ್ ಶೋ ಮೂಲಕ ಅದ್ಧೂರಿ ಸ್ವಾಗತ ಸಿಗಲಿದೆ. ಪ್ರಮುಖ ವೃತ್ತಗಳಲ್ಲಿ ನೂರಾರು ಕಲಾತಂಡಗಳ ಮೆರವಣಿಗೆಯನ್ನು ಆಯೋಜಿಸಲಾಗಿದೆ. ತಮ್ಮನ್ನು ದಾಖಲೆಯ ಮತಗಳ ಅಂತರದಿಂದ ಗೆಲ್ಲಿಸಿದ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ಏರ್ಪಡಿಸಿರುವ ಕೃತಜ್ಞತಾ ಸಮಾವೇಶದಲ್ಲಿ ಸಿಎಂ ಭಾಗವಹಿಸಲಿದ್ದಾರೆ. ಇದೇ ವೇಳೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಮಹತ್ವದ ಪ್ರಗತಿ ಪರಿಶೀಲನಾ ಸಭೆಯನ್ನೂ ಅವರು ನಡೆಸಲಿದ್ದಾರೆ.



