October 12, 2026
Monday, October 12, 2026
spot_img

ಕಾರು ಕಲಿಯುವ ಆಸೆ ದುರಂತದಲ್ಲಿ ಅಂತ್ಯ: ಕೆರೆಗೆ ಕಾರು ಉರುಳಿ ಮಹಿಳೆ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾರು ಚಾಲನೆ ಅಭ್ಯಾಸ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಕೋಲ್ಕತ್ತಾದ ಕೆಸ್ತೋಪುರದ ಪ್ರಫುಲ್ಲ ಕಾನನ್ (ಪಶ್ಚಿಮ) ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಸುಮಿತ್ರಾ ದಾಸ್ ಎಂದು ಗುರುತಿಸಲಾಗಿದೆ.

ಮಗಳನ್ನ ಶಾಲೆಗೆ ಬಿಟ್ಟು ಮನೆಗೆ ಬಂದಿದ್ದರು

ಸ್ಥಳೀಯರ ಮಾಹಿತಿ ಪ್ರಕಾರ, ಸುಮಿತ್ರಾ ದಾಸ್ ತಮ್ಮ ಮಗಳನ್ನು ಸ್ಕೂಟರ್‌ನಲ್ಲಿ ಶಾಲೆಗೆ ಬಿಟ್ಟು ಬಳಿಕ ಮನೆಗೆ ವಾಪಸ್ ಆಗಿದ್ದರು. ಮನೆಗೆ ಬಂದ ನಂತರ ಸ್ಕೂಟರ್ ನಿಲ್ಲಿಸಿ, ಗ್ಯಾರೇಜ್‌ನಲ್ಲಿದ್ದ ಪತಿ ಖರೀದಿಸಿದ್ದ ಹ್ಯುಂಡೈ ಇಯಾನ್ ಕಾರನ್ನು ಹೊರತೆಗೆದಿದ್ದರು.

ನಂತರ ಕಾರು ಚಾಲನೆ ಅಭ್ಯಾಸ ಮಾಡಲು ಹೊರಟಿದ್ದ ವೇಳೆ, ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಕಾರು ರಸ್ತೆ ಬದಿಯಲ್ಲಿದ್ದ ಸಮೀಪದ ಕೆರೆಗೆ ಉರುಳಿ ಬಿದ್ದಿದೆ.

ನೀರಿನಲ್ಲಿ ಸಂಪೂರ್ಣ ಮುಳುಗಿದ ಕಾರು

ಕಾರು ಕೆರೆಗೆ ಬಿದ್ದ ಕೂಡಲೇ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿದ್ದು, ಸುಮಿತ್ರಾ ಅವರನ್ನು ಕಾರಿನಿಂದ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಮಾಹಿತಿ ದೊರೆತ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಕಾರನ್ನು ಕೆರೆಯಿಂದ ಹೊರತೆಗೆಯಲಾಯಿತು. ಆದರೆ, ಅಷ್ಟರಲ್ಲಾಗಲೇ ಸುಮಿತ್ರಾ ದಾಸ್ ಮೃತಪಟ್ಟಿದ್ದರು.

ಕಾರಿನೊಳಗೆ ಮೃತದೇಹ ಪತ್ತೆ

ರಕ್ಷಣಾ ಸಿಬ್ಬಂದಿ ಕಾರನ್ನು ನೀರಿನಿಂದ ಹೊರತೆಗೆದಾಗ ಸುಮಿತ್ರಾ ಅವರ ಮೃತದೇಹ ವಾಹನದೊಳಗೆ ಪತ್ತೆಯಾಗಿದೆ. ಕಾರಿನೊಳಗಿನ ಮೃತದೇಹದ ಸ್ಥಿತಿಯನ್ನು ಗಮನಿಸಿರುವ ಪೊಲೀಸರು, ವಾಹನ ನೀರಿನಲ್ಲಿ ಮುಳುಗುತ್ತಿದ್ದ ಸಂದರ್ಭದಲ್ಲಿ ಸುಮಿತ್ರಾ ಅವರು ಹೊರಬರಲು ಪ್ರಯತ್ನಿಸಿರಬಹುದು ಎಂದು ಶಂಕಿಸಿದ್ದಾರೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Must Read