ಹೊಸದಿಗಂತ ವರದಿ ಮಂಗಳೂರು:
ರಾಜ್ಯದ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆಯನ್ನು ನೀಡುವ ವಾತಾವರಣ ನಿರ್ಮಿಸಬೇಕಾಗಿದೆ. ಆಯುಷ್ಮಾನ್ ಸೇರಿದಂತೆ ಸರಕಾರಿ ಯೋಜನೆಗಳಿಗೆ ಒಳಪಟ್ಟ ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ನೀಡಿರುವ ಸೌಕರ್ಯಗಳನ್ನು ನೀಡದೆ ನಿಯಮ ಉಲ್ಲಂಸಿದರೆ, ದುರುಪಯೋಗ ಪಡಿಸಿದರೆ ಅವರಿಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಲಾಗುವುದು ಎಂದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ತಿಳಿಸಿದರು.
ಆರೋಗ್ಯ ಸಚಿವರಾದ ಬಳಿಕ ಅವರು ಆರೋಗ್ಯ ಇಲಾಖೆಯ ದ.ಕ. ಜಿಲ್ಲಾ ಮಟ್ಟದ ಪ್ರಥಮ ಸಭೆಯನ್ನು ಪಡೀಲ್‌ನ ಪ್ರಜಾಸೌಧದಲ್ಲಿ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಸೋಮವಾರ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ
ಆಯುಷ್ಮಾನ್ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಹಣ ಪಡೆಯಬಾರದು. ಒಂದು ವೇಳೆ ಹೆಚ್ಚುವರಿ ಶುಲ್ಕ ಪಡೆದರೆ ಆರೋಗ್ಯ ಮಿತ್ರರು ಈ ಬಗ್ಗೆ ಗಮನ ಹರಿಸಿ ಮೇಲಿನ ಅಧಿಕಾರಿಗಳ ಮೂಲಕ ಉಚಿತ ಚಿಕಿತ್ಸೆಗೆ ಕ್ರಮ ವಹಿಸಬೇಕು. ಈ ಕಾರ್ಯದಲ್ಲಿ ವಿಫಲರಾಗುವ ಆರೋಗ್ಯ ಮಿತ್ರರ ವಿರುದ್ಧವೇ ಇಲಾಖೆಯಿಂದ ಕ್ರಮ ವಹಿಸಲಾಗುವುದು ಎಂದರು.
ಇದನ್ನೂ ಓದಿ:
ಜನಸಾಮಾನ್ಯರಿಗೂ ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಲಭ್ಯವಾಗುವುದನ್ನು ಖಾತರಿ ಪಡಿಸುವುದಕ್ಕಾಗಿ ಆರೋಗ್ಯ ಮಿತ್ರರನ್ನು ನೇಮಕ ಮಾಡಲಾಗಿದೆ. ಅವರು ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಬೇಕು. ಇದರ ಜತೆಯಲ್ಲೇ ಅಗತ್ಯ ಕೆಲವೊಂದು ಯೋಜನೆಗಳನ್ನು ಜಾರಿಗೊಳಿಸುವುದು ಹಾಗೂ ಅನಗತ್ಯ ಕಾರ್ಯಕ್ರಮಗಳನ್ನು ಕೈಬಿಡುವ ಬಗ್ಗೆಯೂ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿಯಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.
ಬಿಪಿಎಲ್ ರೋಗಿಗಳಿಂದ ಹಣ ವಸೂಲಿ ಬೇಡ
ಹಿಂದೆ ನಾನು ಆರೋಗ್ಯ ಸಚಿವನಾಗಿದ್ದ ವೇಳೆ ಆರೋಗ್ಯ ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತವಾಗಿ ಹಾಗೂ ಎಪಿಎಲ್‌ನವರಿಗೆ 70% ರಷ್ಟು ಉಚಿತ, 30% ರಷ್ಟು ವೆಚ್ಚ ರೋಗಿ ಭರಿಸುವ ವ್ಯವಸ್ಥೆ ಇತ್ತು. ಬಳಿಕ ಅದೀಗ 70% ರಷ್ಟು ರೋಗಿ ಭರಿಸುತ್ತಿದ್ದು, 30% ಸರ್ಕಾರ ಎಂಬಂತಾಗಿದೆ. ಇದರ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು. ಎಪಿಎಲ್ ಹಾಗೂ ಬಿಪಿಎಲ್‌ನವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸುವ ಬಗ್ಗೆ ರೂಪುರೇಷೆ ಮಾಡಲಾಗುವುದು ಎಂದು ಹೇಳಿದರು.
ವೈದ್ಯರ ನೇಮಕಕ್ಕೆ ಹೊಸ ಯೋಜನೆ
ವೈದ್ಯರು ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಮಾಡಲು ಆಕರ್ಷಿಸುವ ಹಾಗೂ ಪ್ರೇರಣೆ ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು. ಸರಕಾರ ಯೋಜನೆಗಳು ಸಮರ್ಪಕವಾಗಿ ನಿರ್ವಹಣೆಯಾಗಬೇಕಾದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಉತ್ತಮವಾಗಿರಬೇಕು. ಅದಕ್ಕಾಗಿ ಜಿಲ್ಲಾ ಮಟ್ಟದ ವಿವಿಧ ಹಂತಗಳ ಅಧಿಕಾರಿ, ಸಿಬ್ಬಂದಿಯಿಂದ ಸಮಸ್ಯೆಯನ್ನು ಅರಿತುಕೊಳ್ಳಲಾಗಿದೆ. ಹಲವಾರು ಸಮಸ್ಯೆಗಳು ಗಮನಕ್ಕೆ ಬಂದಿವೆ. ಸಮಸ್ಯೆ ಬಗೆಹರಿಸದೆ ಯೋಜನೆಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗದು. ಅದಕ್ಕಾಗಿ ಸರಕಾರಿ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕ ಮಾಡಬೇಕಿದೆ ಎಂದರು.
ಗುತ್ತಿಗೆ ಆಧಾರದಲ್ಲಿ ನೇಮಕ ಆದ ವೈದ್ಯರು ಮೂರು ವರ್ಷ ಸೇವೆ ಸಲ್ಲಿಸಿದರೆ ಅವರನ್ನು ಖಾಯಂಗೊಳಿಸುವ ಪದ್ಧತಿ ಹಿಂದೆ ಮಾಡಲಾಗಿತ್ತು. ಇದರಿಂದ ಉದ್ಯೋಗ ಭದ್ರತೆಯ ಕಾರಣದಿಂದ ಹೆಚ್ಚಿನ ವೈದ್ಯರ ನೇಮಕವಾಗುತ್ತಿತ್ತು. ಆದರೆ ಅದೀಗ ಬದಲಾಗಿದೆ. ಅದನ್ನು ಮರು ಪರಿಶೀಲಿಸಲಾಗುವುದು. ಗುಡ್ಡಗಾಡು, ಬುಡಕಟ್ಟು ಪ್ರದೇಶ, ಕುಗ್ರಾಮ ಪ್ರದೇಶಗಳಿಗೆ ವೈದ್ಯರು ಹೋಗುವುಗು ಕಡಿಮೆ. ಅದಕ್ಕಾಗಿ ಅಲ್ಲಿ ಕೆಲಸ ನಿರ್ವಹಿಸುವವರಿಗೆ ಹೆಚ್ಚುವರಿ ವೇತನ ನೀಡುವ ಬಗ್ಗೆಯೂ ಚರ್ಚಿಸಲಾಗುವುದು. ಇವೆಲ್ಲವೂ ಪ್ರಾಥಮಿಕ ಹಂತದಲ್ಲಿದ್ದು, ಈ ಬಗ್ಗೆ ಚರ್ಚಿಸಿ ನಿಯಮ ರೂಪಿಸಿ, ಮುಖ್ಯಮಂತ್ರಿ ಅನುಮೋದನೆ ಪಡೆದುಕೊಂಡು ಕ್ರಮ ವಹಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಸಚಿವ ಕೃಷ್ಣ ಬೈರೇಗೌಡ ಅವರು ತಮಗೆ ನೀಡಲಾದ ಖಾತೆ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಎ ಗೊಂದಲವನ್ನು ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಸರಿ ಮಾಡುತ್ತಾರೆ. ರಾಜಕೀಯ ವ್ಯವಸ್ಥೆಯಲ್ಲಿ ಇದೆ ಸ್ವಾಭಾವಿಕ. ಎಲ್ಲವನ್ನೂ ಬಗೆಹರಿಸಿ ರಾಜ್ಯದ ಜನತೆಗೆ ಅತ್ಯುತ್ತಮ ಸೇವೆಯನ್ನು ಸರಕಾರ ನೀಡುತ್ತದೆ ಎಂದರು.



