June 8, 2026
Monday, June 8, 2026
spot_img

ಸಾಮಾನ್ಯರಿಗೆ ಅವಕಾಶ ನೀಡುವ ಬಿಜೆಪಿ ಸಂಸ್ಕೃತಿ ಮುಂದುವರಿದಿದೆ: ಈರಣ್ಣಾ ಕಡಾಡಿ ಶ್ಲಾಘನೆ

ಹೊಸದಿಗಂತ ವರದಿ ಬೆಳಗಾವಿ :

ತಮ್ಮ ರಾಜ್ಯಸಭಾ ಸದಸ್ಯತ್ವದ ಅವಧಿ ಇದೇ ತಿಂಗಳ 25ರಂದು ಮುಕ್ತಾಯಗೊಳ್ಳಲಿದ್ದು, ನೂತನ ರಾಜ್ಯಸಭಾ ಸದಸ್ಯರಾಗಿ ಧಾರವಾಡದ ಹಾಲುಮತದ ಎಂ. ನಾಗರಾಜ್ ಅವರನ್ನು ಆಯ್ಕೆ ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಸೋಮವಾರ ಬೆಳಗಾವಿ ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷವು ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುವ ಪರಂಪರೆಯನ್ನು ಮುಂದುವರಿಸಿದ್ದು, ಎಂ. ನಾಗರಾಜ್ ಅವರ ಜೊತೆಗೆ ವಿಧಾನಪರಿಷತ್ತಿಗೆ ಲಿಂಗಾಯತ ಸಮಾಜದ ಲಿಂಗರಾಜ್ ಪಾಟೀಲ್ ಹಾಗೂ ಮೈಸೂರಿನ ಮಡಿವಾಳ ಸಮಾಜದ ರಘು ಕೌಟಿಲ್ಯ ಅವರನ್ನು ಆಯ್ಕೆ ಮಾಡಿರುವುದು ಸಂತಸದ ವಿಷಯ ಎಂದು ಹೇಳಿದರು.

ತಾವು ಕೂಡ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದಲ್ಲಿ ಬೆಳೆದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿ.ಎಲ್. ಸಂತೋಷ, ಪ್ರಹ್ಲಾದ ಜೋಶಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ:

ತಮ್ಮ ಆರು ವರ್ಷಗಳ ಅವಧಿಯಲ್ಲಿ ₹23.53 ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ ಅವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರಿಡುವ ಹಾಗೂ ಅವರ ಪ್ರತಿಮೆ ಸ್ಥಾಪಿಸುವ ಯೋಜನೆ ಅಂತಿಮ ಹಂತದಲ್ಲಿದೆ ಎಂದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯ ಅಂಗೀಕಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಸರ್ವಕಾಲಿಕ ಸತ್ಯ. ಅದನ್ನು ಮತ್ತೆ ಮತ್ತೆ ಒತ್ತಿ ಹೇಳುವ ಅಗತ್ಯವಿಲ್ಲ. ಮಹಾನಗರ ಪಾಲಿಕೆಯಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಈ ವಿಷಯವನ್ನು ಮಹಾಪೌರರು, ಉಪಮಹಾಪೌರರು ಹಾಗೂ ಶಾಸಕರು ಚರ್ಚಿಸಿ ನಿರ್ಧರಿಸಲಿದ್ದಾರೆ”ಎಂದು ಹೇಳಿದರು.

ಈ ವೇಳೆ ನಗರಸೇವಕ ರಾಜಶೇಖರ ಡೋಣಿ, ಈರಯ್ಯಾ ಖೋತ್, ಬಾರಕರ್, ಮಹಾದೇವ ರಾಥೋಡ್, ಸಿದ್ಧನಗೌಡ ಪಾಟೀಲ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !