June 9, 2026
Tuesday, June 9, 2026
spot_img

ಬೆಂಗಳೂರು-ತುಮಕೂರು ರೈಲು ಮಾರ್ಗದಲ್ಲಿ ವಿದ್ಯುತ್ ವ್ಯವಸ್ಥೆ ಉನ್ನತೀಕರಣ: ಗ್ರೀನ್ ಸಿಗ್ನಲ್ ನೀಡಿದ ಭಾರತೀಯ ರೈಲ್ವೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಅತ್ಯಂತ ಜನನಿಬಿಡ ರೈಲ್ವೆ ಕಾರಿಡಾರ್‌ಗಳಲ್ಲಿ ಒಂದಾದ ಬೆಂಗಳೂರು-ತುಮಕೂರು ರೈಲು ಮಾರ್ಗದಲ್ಲಿ ರೈಲುಗಳ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿದ್ಯುತ್ ಎಳೆತ (ಟ್ರಾಕ್ಷನ್) ವ್ಯವಸ್ಥೆಯನ್ನು ಉನ್ನತೀಕರಿಸಲು ಭಾರತೀಯ ರೈಲ್ವೆ ಅನುಮೋದನೆ ನೀಡಿದೆ.

ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿರುವ ಈ ಯೋಜನೆಯಡಿ, ಪ್ರಸ್ತುತ ಇರುವ ಎಲೆಕ್ಟ್ರಿಕ್ ಟ್ರಾಕ್ಷನ್ ವ್ಯವಸ್ಥೆಯನ್ನು 120 ಟ್ರ್ಯಾಕ್ ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೇಲ್ದರ್ಜೆಗೇರಿಸಲಾಗುತ್ತದೆ. ಈ ಕಾಮಗಾರಿಗೆ ಒಟ್ಟು ₹162.57 ಕೋಟಿ ಮಂಜೂರಾಗಿದೆ.

ಬೆಂಗಳೂರು-ತುಮಕೂರು ವಿಭಾಗವು ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಹೆಚ್ಚಿನ ಸಂಚಾರ ಹೊಂದಿರುವ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಈ ಮಾರ್ಗವು ಪುಣೆ-ಹುಬ್ಬಳ್ಳಿ-ಚಿಕ್ಕಜಾಜೂರು-ಬೀರೂರು-ತುಮಕೂರು-ಬೆಂಗಳೂರು-ಸೇಲಂ-ಕನ್ಯಾಕುಮಾರಿ ಕಾರಿಡಾರ್‌ನ ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ.

ಇದನ್ನೂ ಓದಿ:

ಈ ಯೋಜನೆಯಿಂದ ಬೆಂಗಳೂರು ಮಹಾನಗರ ಪ್ರದೇಶ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪ್ರಮುಖ ರೈಲು ಮಾರ್ಗದಲ್ಲಿನ ದಟ್ಟಣೆ ಕಡಿಮೆಯಾಗಲಿದ್ದು, ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳ ಸಂಚಾರ ಇನ್ನಷ್ಟು ಸುಗಮವಾಗುವ ನಿರೀಕ್ಷೆಯಿದೆ.

ಕರ್ನಾಟಕ ಹಾಗೂ ದಕ್ಷಿಣ ಭಾರತದ ವಿವಿಧ ಭಾಗಗಳ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಈ ಯೋಜನೆಯು, ರೈಲ್ವೆ ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸುವುದರ ಜೊತೆಗೆ ಭವಿಷ್ಯದ ಹೆಚ್ಚುವರಿ ಸಂಚಾರದ ಅಗತ್ಯಗಳನ್ನೂ ಪೂರೈಸಲು ನೆರವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !