June 30, 2026
Tuesday, June 30, 2026
spot_img

ಭಾರತದ ಅತಿ ಉದ್ದದ ಝೋಜಿಲಾ ಸುರಂಗ ಕಾಮಗಾರಿ ಪರಿಶೀಲಿಸಿದ ನಿತಿನ್ ಗಡ್ಕರಿ: ಎಂಜಿನಿಯರಿಂಗ್ ಕೌಶಲ್ಯಕ್ಕೆ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಜಮ್ಮು-ಕಾಶ್ಮೀರದ ಝೋಜಿಲಾ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿತಿನ್ ಗಡ್ಕರಿ, 14 ಕಿಲೋಮೀಟರ್ ಉದ್ದದ ಝೋಜಿಲಾ ಸುರಂಗ ಮಾರ್ಗವು ಭಾರತದ ಅತಿ ಉದ್ದದ ಸುರಂಗವಾಗಿದ್ದು, ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದರು.

ಮೈನಸ್ ನಾಲ್ಕು ಡಿಗ್ರಿ ತಾಪಮಾನದಲ್ಲಿಯೂ ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ನಿರಂತರವಾಗಿ ದುಡಿದ ಪರಿಣಾಮ ಈ ಐತಿಹಾಸಿಕ ಯೋಜನೆ ಸಾಕಾರಗೊಳ್ಳುತ್ತಿದೆ. ಇದು ಕೇವಲ ಸುರಂಗ ಯೋಜನೆಯಲ್ಲ, ಭಾರತದ ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ತಾಂತ್ರಿಕ ಕೌಶಲ್ಯದ ಪ್ರತೀಕವಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:

ಕಾರ್ಗಿಲ್ ಮತ್ತು ಲೇಹ್ ಪ್ರದೇಶಗಳನ್ನು ಸಂಪರ್ಕಿಸುವ ಸುಮಾರು ₹18 ಸಾವಿರ ಕೋಟಿ ಮೌಲ್ಯದ ವಿವಿಧ ಸುರಂಗ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದ ಅವರು, 230 ಕಿಲೋಮೀಟರ್ ಉದ್ದದ ಕಾರ್ಗಿಲ್-ಝನ್‌ಸ್ಕರ್ ರಸ್ತೆ ಯೋಜನೆಯ ಶೇಕಡಾ 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು. ಈ ಯೋಜನೆಯಡಿ 62 ಸೇತುವೆಗಳ ನಿರ್ಮಾಣವೂ ನಡೆಯುತ್ತಿದ್ದು, ಇದು ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಲ್ಲಿ ಒಂದಾಗಿದೆ ಎಂದು ವಿವರಿಸಿದರು.

ಹಿಮಾಚಲ ಪ್ರದೇಶದ ಬರಲಾಚಾ ಲಾದಲ್ಲಿ 13 ಕಿಲೋಮೀಟರ್ ಉದ್ದದ ಮತ್ತೊಂದು ಸುರಂಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಅದರ ವಿವರವಾದ ಯೋಜನಾ ವರದಿ (ಡಿಪಿಆರ್) ಈ ವರ್ಷದ ಅಕ್ಟೋಬರ್ ವೇಳೆಗೆ ಸಿದ್ಧವಾಗಲಿದೆ ಎಂದು ಗಡ್ಕರಿ ಮಾಹಿತಿ ನೀಡಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು ₹2 ಲಕ್ಷ ಕೋಟಿ ಮೌಲ್ಯದ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ಕೆಲವು ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ. ಈ ಯೋಜನೆಗಳಿಂದ ಹಲವು ವರ್ಷಗಳಿಂದ ಮೂಲಸೌಕರ್ಯ ಅಭಿವೃದ್ಧಿಯಿಂದ ವಂಚಿತವಾಗಿದ್ದ ಪ್ರದೇಶಗಳು ಹೊಸ ಅಭಿವೃದ್ಧಿಯತ್ತ ಸಾಗುತ್ತಿದ್ದು, ಜಮ್ಮು ಮತ್ತು ಕಾಶ್ಮೀರ ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯುತ್ತಿದೆ ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !