June 9, 2026
Tuesday, June 9, 2026
spot_img

ಕಾ*ಮುಕರ ವಿಕೃತಿಗೆ ಬೆಚ್ಚಿಬಿದ್ದ ದಾವಣಗೆರೆ: ವಿವಾಹಿತೆಯ ಮೇಲೆ ಸಾಮೂಹಿಕ ಅತ್ಯಾಚಾ*ರ, ವೈರಲ್ ವಿಡಿಯೋದಿಂದ ಬಯಲಾಯ್ತು ಸತ್ಯ

ಹೊಸದಿಗಂತ ವರದಿ ದಾವಣಗೆರೆ:

ವಿವಾಹಿತ ಮಹಿಳೆಯೊಬ್ಬರ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಚನ್ನಗಿರಿ ತಾಲ್ಲೂಕು ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಹೊರವಲಯದ ತೋಟದಲ್ಲಿ ಈ ಘಟನೆ ನಡೆದಿದ್ದು, ಕಾಮುಕರು ಒಂಟಿ ಮಹಿಳೆಗೆ ಮತ್ತು ಬರಿಸುವ ಪದಾರ್ಥ ನೀಡಿ ಈ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ರೆಕಾರ್ಡ್ ಮಾಡಿದ್ದಾರೆ ಎನ್ನಲಾದ ಮಹಿಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಲ್ಲಾ 10 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ತೋಟದಲ್ಲಿ ಅಮಾನುಷ ಕೃತ್ಯ

ಪತಿಯೊಂದಿಗೆ ಜಗಳವಾಡಿ ತವರೂರಿಗೆ ಹೋಗುತ್ತಿದ್ದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಇಬ್ಬರು ಯುವಕರು ತಂಪು ಪಾನೀಯ ಕುಡಿಸಿದ್ದು, ನಂತರ ಪ್ರಜ್ಞಾಹೀನಳಾಗಿದ್ದ ಮಹಿಳೆ ಮೇಲೆ ಗ್ರಾಮದ ಹೊರವಲಯದಲ್ಲಿರುವ ತೋಟದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದ ಫೋಟೋ, ವೀಡಿಯೋ ವೈರಲ್ ಆಗಿರುವ ವಿಚಾರ ತಿಳಿದ ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಜೊತೆಗೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 70(ಸಾಮೂಹಿಕ ಅತ್ಯಾಚಾರ) ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೈರಲ್ ವಿಡಿಯೋ ಬಳಿಕ ಪ್ರಕರಣ ಬೆಳಕಿಗೆ

ಪ್ರಾಥಮಿಕ ಮಾಹಿತಿ ಪ್ರಕಾರ 6 ಮಂದಿ ಯುವಕರು ಅತ್ಯಾಚಾರ ಎಸಗಿದ್ದು, ನಾಲ್ವರು ವೀಡಿಯೋ ಹರಿಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 10 ಮಂದಿಯನ್ನು ಬಸವಾಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವಿಚಾರಣೆಯ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಎಸ್ಪಿ ಡಾ.ಹೆಚ್.ಟಿ.ಶೇಖರ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !