ಹೊಸದಿಗಂತ ವರದಿ ಮುಂಡಗೋಡ:
ಕೊಲೆ ಪ್ರಕರಣ ಹಾಗೂ ಮೀಟರ ಬಡ್ಡಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ತಾಲೂಕಿನ ಇಬ್ಬರನ್ನು ಗುಂಡಾ ಕಾಯ್ದೆ (ರೌಡಿಶೀಟರ) ಅಡಿಯಲ್ಲಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಸಂಜು ನವಲೆ ಎಂಬಾತನ ಮೇಲೆ ಎರಡು ಕೊಲೆ, ಮೀಟರ ಬಡ್ಡಿ ಸೇರಿ ಐದು ಪ್ರಕರಣ ಹಾಗೂ ಶಬ್ಬೀರ ಮಸ್ತಮದಾನಿ ಕೊಲೆ ಹಾಗೂ ಮೀಟರ್ ಬಡ್ಡಿ ಸೇರಿ 8 ಪ್ರಕರಣಗಳು ಇವೆ. ಇಲ್ಲಿನ ಪೊಲೀಸರು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು ಈ ಇಬ್ಬರ ಆರೋಪಿಗಳ ಮೇಲೆ ಗುಂಡಾ ಕಾಯ್ದೆ ಹಾಕಿ ಗಡಿಪಾರು ಮಾಡುವಂತೆ ವರದಿ ನೀಡಿದ್ದರು. ಇದರ ಆಧಾರದ ಮೇಲೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು, ಸಂಜು ನವಲೆ ಮತ್ತು ಶಬ್ಬೀರ ಮಸ್ತಮದಾನಿ ಮೇಲೆ ಗುಂಡಾ ಕಾಯ್ದೆ ಹಾಕಿ ಬಳ್ಳಾರಿ ಜೈಲಿಗೆ ಹಾಕುವಂತೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಕಳೆದ ಐದು ತಿಂಗಳಿನ ಅವಧಿಯಲ್ಲಿ ಕೊಲೆ, ಮೀಟರಬಡ್ಡಿ ಸೇರಿದಂತೆ ಇತರೆ ಪ್ರಕರಣದಲ್ಲಿ 12 ಜನರನ್ನು ಗಡಿಪಾರು ಮಾಡಲಾಗಿದೆ. ಆರು ಜನರನ್ನು ಉಪವಿಭಾಗಧಿಕಾರಿ ಗಡಿಪಾರು ಮಾಡಿದರೆ ಇನ್ನು ಆರು ಜನರನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಗಡಿಪಾರು ಮಾಡಿದ್ದಾರೆ ಎಂದು ಪೊಲೀಸ ಬಲ ಮೂಲಗಳಿಂದ ತಿಳಿದುಬಂದಿದೆ.



