June 11, 2026
Thursday, June 11, 2026
spot_img

‘ಆಲ್ಫಾ’ ಆಕ್ಷನ್ ಪ್ಯಾಕ್ಡ್ ಟೀಸರ್ ಔಟ್: ಆಲಿಯಾ ಭಟ್ ಸಾಹಸಕ್ಕೆ ಫಿದಾ ಆಗಿ ಮುಕ್ತಕಂಠದಿಂದ ಶ್ಲಾಘಿಸಿದ ಬಿಗ್ ಬಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆಲಿಯಾ ಭಟ್ ನಟನೆಯ, ಯಶ್ ರಾಜ್ ಫಿಲ್ಮ್ಸ್ (YRF) ಸ್ಪೈ ಯೂನಿವರ್ಸ್‌ನ ಬಹುನಿರೀಕ್ಷಿತ ‘ಆಲ್ಫಾ’ ಚಿತ್ರದ ಮೊದಲ ಟೀಸರ್ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್, ಆಲಿಯಾ ಭಟ್ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಪೂರ್ವಕ ಸಂದೇಶ ಹಂಚಿಕೊಂಡಿದ್ದಾರೆ.

ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಮೊದಲ ಮಹಿಳಾ ಪ್ರಧಾನ ಚಿತ್ರ
ಆದಿತ್ಯ ಚೋಪ್ರಾ ನಿರ್ಮಾಣದ ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ 7ನೇ ಚಿತ್ರವಾಗಿ ‘ಆಲ್ಫಾ’ ಮೂಡಿಬರುತ್ತಿದ್ದು, ಇದು ಈ ಫ್ರಾಂಚೈಸಿಯ ಮೊದಲ ಮಹಿಳಾ ಪ್ರಧಾನ ಆಕ್ಷನ್ ಚಿತ್ರವಾಗಿದೆ. ಶಿವ ರವೈಲ್ ನಿರ್ದೇಶನದ ಈ ಸಿನಿಮಾದಲ್ಲಿ ಆಲಿಯಾ ಭಟ್ ಮತ್ತು ಶರ್ವರಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಸರ್‌ನಲ್ಲಿನ ರೋಮಾಂಚಕ ಕಥಾಹಂದರ
ಸುಮಾರು ಎರಡು ನಿಮಿಷಗಳ ಈ ಟೀಸರ್ ಅತ್ಯಂತ ರೋಮಾಂಚಕ ಹಾಗೂ ಅದ್ಭುತ ಸಾಹಸ ದೃಶ್ಯಗಳಿಂದ ಕೂಡಿದೆ. ಟೀಸರ್ ಆರಂಭದಲ್ಲಿ ಬಾಬಿ ಡಿಯೋಲ್, ಆಲಿಯಾ ಭಟ್ (ಸೀತಾ) 18ನೇ ಹುಟ್ಟುಹಬ್ಬದಂದು ಉಡುಗೊರೆಯಾಗಿ ಒಂದು ಕೋಡ್ ರೂಮ್ ಕೀ ನೀಡುವ ಮೂಲಕ ಅವರ ಮೊದಲ ರಹಸ್ಯ ಮಿಷನ್ ಅನ್ನು ನಿಯೋಜಿಸುತ್ತಾರೆ. ಭಾರತದ ಮುಂದಿನ ಪೀಳಿಗೆಯ ಸೂಪರ್ ಸೋಲ್ಜರ್‌ಗಳನ್ನು ಸಿದ್ಧಪಡಿಸುವ ‘ಆಲ್ಫಾ’ ಎಂಬ ರಹಸ್ಯ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ಬೆಳೆದ ಆಲಿಯಾ ಭಟ್ ಹೇಗೆ ಶತ್ರುಗಳ ಹೆಡೆಮುರಿ ಕಟ್ಟುವ ಕೊಲೆಗಡುಕ ಯಂತ್ರವಾಗಿ ಬದಲಾಗುತ್ತಾರೆ ಎಂಬುದರ ಝಲಕ್ ಇಲ್ಲಿದೆ.

ಆಲಿಯಾ ಭಟ್ ಬಗ್ಗೆ ಅಮಿತಾಭ್ ಮೆಚ್ಚುಗೆ
ಟೀಸರ್ ಬಿಡುಗಡೆಯಾದ ತಕ್ಷಣ ಎಕ್ಸ್ ಖಾತೆಯಲ್ಲಿ ಟೀಸರ್ ಹಂಚಿಕೊಂಡ ಅಮಿತಾಭ್ ಬಚ್ಚನ್ ಅವರು ತಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳು ತಿಳಿಸುವ ಮೂಲಕ ಚಿತ್ರತಂಡವನ್ನು ಬೆಂಬಲಿಸಿದ್ದಾರೆ. ಬಿಗ್ ಬಿ ಈ ಹಿಂದೆ ‘ಕೌನ್ ಬನೇಗಾ ಕರೋಡ್‌ಪತಿ’ ಶೋನಲ್ಲೂ ಆಲಿಯಾ ತಮ್ಮ ನೆಚ್ಚಿನ ನಟಿ ಎಂದು ಹೇಳಿದ್ದರು. ಅಮಿತಾಭ್ ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಿತ್ರದ ತಾರಾಗಣ ಮತ್ತು ಬಿಡುಗಡೆ ದಿನಾಂಕ
ಈ ಚಿತ್ರದಲ್ಲಿ ಆಲಿಯಾ ಭಟ್, ಶರ್ವರಿ ಜೊತೆಗೆ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ಜುಲೈ 10 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ಚಿತ್ರತಂಡವು ಒಂದು ವಾರ ಮುಂಚಿತವಾಗಿ ಅಂದರೆ ಜುಲೈ 3, ರಂದೇ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !