August 6, 2026
Thursday, August 6, 2026
spot_img

ಲೈಸೆನ್ಸ್ ಇಲ್ಲದೇ ಬೈಕ್ ಓಡಿಸಿದ ಮಕ್ಕಳು: ತಲಾ 25 ಸಾವಿರ ರೂ. ದಂಡ ತೆತ್ತ ಪೇರೆಂಟ್ಸ್‌!

ಹೊಸದಿಗಂತ ಯಲ್ಲಾಪುರ:

ಅಪ್ರಾಪ್ತ ವಯಸ್ಕರು ಬೈಕ್ ಚಲಾಯಿಸಿದರೆ ಪಾಲಕರು ಹೇಗೆ ದಂಡ ತೆರಬೇಕಾಗುತ್ತದೆ ಎಂಬುದಕ್ಕೆ ಯಲ್ಲಾಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತಾಲೂಕಿನ ಕಿರವತ್ತಿಯಲ್ಲಿ ಲೈಸೆನ್ಸ್ ಇಲ್ಲದೆ ಬೈಕ್ ಓಡಿಸುತ್ತಿದ್ದ ಅಪ್ರಾಪ್ತರ ಪಾಲಕರಿಗೆ ನ್ಯಾಯಾಲಯವು ಬರೋಬ್ಬರಿ 50 ಸಾವಿರ ರೂಪಾಯಿ ದಂಡ ವಿಧಿಸಿದೆ.

ಜೂನ್ 9ರಂದು ಹುಬ್ಬಳ್ಳಿ ಕಡೆಯಿಂದ ಇಬ್ಬರು ಅಪ್ರಾಪ್ತ ಹುಡುಗರು ಬೈಕ್ ಚಲಾಯಿಸಿಕೊಂಡು ಬರುತ್ತಿರುವುದನ್ನು ಪೊಲೀಸರು ಗಮನಿಸಿದ್ದರು. ವಾಹನ ತಡೆದು ತಪಾಸಣೆ ನಡೆಸಿದಾಗ, ಅವರಿಗೆ 18 ವರ್ಷ ತುಂಬಿರದ ಕಾರಣ ಚಾಲನಾ ಪರವಾನಗಿ (ಲೈಸೆನ್ಸ್) ಇರಲಿಲ್ಲ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಅಪ್ರಾಪ್ತರ ವಾಹನ ಚಾಲನೆಯಿಂದಾಗುವ ಅಪಾಯಗಳ ಬಗ್ಗೆ ಪಾಲಕರಿಗೆ ಫೋನ್ ಮುಖಾಂತರ ತಿಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಕೋರ್ಟ್ ನೀಡಿದ ಬಿಗ್ ಶಾಕ್:
ಜೂನ್ 11ರಂದು ಪ್ರಕರಣದ ವಿಚಾರಣೆ ನಡೆಸಿದ ಯಲ್ಲಾಪುರ ನ್ಯಾಯಾಲಯವು, ಮಕ್ಕಳಿಗೆ ಬೈಕ್ ನೀಡಿದ ತಪ್ಪು ಇಬ್ಬರು ಪಾಲಕರಿಗೆ ತಲಾ 25 ಸಾವಿರ ರೂ.ನಂತೆ ಒಟ್ಟು 50 ಸಾವಿರ ರೂ. ದಂಡ ಪಾವತಿಸಲು ಆದೇಶಿಸಿತು. ಕೋರ್ಟ್ ಆದೇಶದಂತೆ ಕಲಘಟಗಿಯ ಚಿತ್ರಗಾರ ಓಣಿಯ ಬಾಬುರಾವ್ ಆರ್. ಯಲ್ಲಾಪುರಕರ್ ಹಾಗೂ ಸಂಗಮೇಶ್ವರದ ರಾಮಣ್ಣ ಅಮೃತ ಕಲ್ಯಾಣಕರ್ ಭಾರಿ ದಂಡದ ಮೊತ್ತವನ್ನು ಪಾವತಿಸಿದ್ದಾರೆ.

ಗಮನಿಸಿ: ಈ ಘಟನೆಯು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಮುನ್ನ ನೂರು ಬಾರಿ ಯೋಚಿಸಬೇಕು ಎನ್ನುವುದಕ್ಕೆ ಪಾಲಕರಿಗೆ ನೀಡಿದ ಗಂಭೀರ ಎಚ್ಚರಿಕೆಯಾಗಿದೆ. ಲೈಸೆನ್ಸ್ ಇಲ್ಲದ ಮಕ್ಕಳಿಗೆ ಗಾಡಿ ನೀಡಿದರೆ ಕಾನೂನು ಕ್ರಮ ಗ್ಯಾರಂಟಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !