ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ತಮ್ಮ ಫೋಟೋವನ್ನು ಮಾರ್ಫ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಕ್ಕೆ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿ ಇದೀಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಗಿರೀಶ್ ಕಾಥ್‌ಪಾಲಿಯಾ ಅವರು ಕಾಕ್ರೋಚ್ ಜನತಾ ಪಾರ್ಟಿ ನಾಯಕರಾದ ಅಭಿಜೀತ್ ದಿಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ ಮತ್ತು ರತ್ನಾ ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
ಜಂತರ್ ಮಂತರ್‌ನಲ್ಲಿ ನಡೆದ CJP ಪ್ರತಿಭಟನೆಯ ವೇಳೆ ತನ್ನ ವೈಯಕ್ತಿಕ ಫೋಟೋವನ್ನು ಅನುಮತಿಯಿಲ್ಲದೆ ಪಡೆದು AI ಆಧಾರಿತ ಫೇಸ್‌ಸ್ವಾಪ್ ತಂತ್ರಜ್ಞಾನದಿಂದ ಬದಲಾಯಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಾರ್ಫ್ ಮಾಡಲಾದ ಚಿತ್ರವನ್ನು ದೊಡ್ಡ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳಲ್ಲಿ ಪ್ರದರ್ಶಿಸಲಾಗಿದ್ದು, ಬಳಿಕ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಹರಡಲಾಗಿದೆ ಎಂಬುದು ಅವರ ದೂರಿನಲ್ಲಿದೆ.
ಇದನ್ನೂ ಓದಿ:
ಈ ಸಂಬಂಧ ದೆಹಲಿ ಪೊಲೀಸರು ಗುರುವಾರ ಸೈಬರ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಹಿಳೆ ತಮ್ಮ ದೂರಿನಲ್ಲಿ CJP ನಾಯಕರ ಹೆಸರುಗಳನ್ನು ಉಲ್ಲೇಖಿಸಿದ್ದರೂ, ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅವರನ್ನು ಆರೋಪಿಗಳಾಗಿ ಹೆಸರಿಸಲಾಗಿಲ್ಲ ಎಂದು ವರದಿಯಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಮಹಿಳೆ ಸಾಕ್ಷ್ಯವಾಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಸಲ್ಲಿಸಿದ್ದಾರೆ.
24 ಗಂಟೆಗಳೊಳಗೆ ಕ್ರಮ
ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿರುವ ಆಕ್ಷೇಪಾರ್ಹ ಚಿತ್ರಗಳು ಮತ್ತು ಸಂಬಂಧಿತ ಲಿಂಕ್‌ಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ Metaಗೆ ನಿರ್ದೇಶನ ನೀಡಿದೆ. ಸಂಬಂಧಿತ ವೆಬ್ ಲಿಂಕ್‌ಗಳನ್ನು ಸ್ವೀಕರಿಸಿದ 24 ಗಂಟೆಗಳೊಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮಹಿಳೆಗೆ ಪೊಲೀಸ್ ಭದ್ರತೆ ಒದಗಿಸುವಂತೆ ಹಾಗೂ ಅವರ ವಿಳಾಸವನ್ನು ಗೌಪ್ಯವಾಗಿಡುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ.
ಈ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಎರಡು ವಾರಗಳೊಳಗೆ ಸ್ಥಿತಿಗತಿ ವರದಿ ಸಲ್ಲಿಕೆಯಾಗಬೇಕಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ನಿಗದಿಪಡಿಸಲಾಗಿದೆ.



