Saturday, September 6, 2025

GST ಸುಧಾರಣೆ: ಐಪಿಎಲ್ ಟಿಕೆಟ್‌ ದರಕ್ಕೆ ದೊಡ್ಡ ಹೊಡೆತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರದ ಜಿಎಸ್‌ಟಿ ಸುಧಾರಣೆ ನೀತಿಯ ಪರಿಣಾಮವಾಗಿ ಐಪಿಎಲ್ ಅಭಿಮಾನಿಗಳಿಗೆ ಭಾರೀ ಆಘಾತ ಎದುರಾಗಲಿದೆ. ಈಗಾಗಲೇ ದುಬಾರಿ ಎಂದು ಹೇಳಲಾಗುತ್ತಿದ್ದ ಪಂದ್ಯ ಟಿಕೆಟ್‌ಗಳು ಇನ್ನಷ್ಟು ಹೆಚ್ಚುವರಿ ಬೆಲೆಯಲ್ಲೇ ಲಭ್ಯವಾಗಲಿವೆ. ಕ್ಯಾಸಿನೋ, ರೇಸ್ ಕ್ಲಬ್ ಹಾಗೂ ಐಪಿಎಲ್ ಟಿಕೆಟ್‌ಗಳನ್ನು ಸರ್ಕಾರ ‘ಲಕ್ಸುರಿ ಗೂಡ್ಸ್’ ವಿಭಾಗಕ್ಕೆ ಸೇರಿಸಿ, ಜಿಎಸ್‌ಟಿ ದರವನ್ನು 28ರಿಂದ 40 ಶೇಕಡಾ ಸ್ಲ್ಯಾಬ್‌ಗೆ ಏರಿಸಿದೆ.

ಹಿಂದಿನ ನಿಯಮ ಪ್ರಕಾರ, 500 ರೂ. ಟಿಕೆಟ್‌ಗೆ 28% ಜಿಎಸ್‌ಟಿ ಸೇರಿ ಒಟ್ಟು ಬೆಲೆ 640 ರೂ. ಆಗುತ್ತಿತ್ತು. ಆದರೆ ಹೊಸ ಜಿಎಸ್‌ಟಿ ದರದ ಪ್ರಕಾರ, ಇದೇ ಟಿಕೆಟ್‌ ಬೆಲೆ 700 ರೂ. ಆಗಲಿದೆ. ಹೀಗಾಗಿ ಸಾಮಾನ್ಯ ಅಭಿಮಾನಿಗಳಿಗೆ ಐಪಿಎಲ್ ಪಂದ್ಯ ವೀಕ್ಷಣೆ ಇನ್ನಷ್ಟು ದುಬಾರಿಯಾಗಲಿದೆ. ಸರ್ಕಾರದ ಈ ನಿರ್ಧಾರವನ್ನು ಕ್ರಿಕೆಟ್ ಅಭಿಮಾನಿಗಳು ತೀವ್ರವಾಗಿ ಚರ್ಚೆ ಮಾಡುತ್ತಿದ್ದಾರೆ.

ಗಮನಾರ್ಹ ವಿಷಯವೆಂದರೆ, ಭಾರತದ ಇತರ ಕ್ರಿಕೆಟ್ ಪಂದ್ಯಗಳು ಹಾಗೂ ಕ್ರೀಡೆಗಳ ಟಿಕೆಟ್‌ಗಳಿಗೆ ಶೇ.18ರ ತೆರಿಗೆ ಸ್ಲ್ಯಾಬ್ ಅನ್ವಯವಾಗುತ್ತದೆ. 500 ರೂ. ಒಳಗಿನ ಟಿಕೆಟ್‌ಗಳಿಗೆ ಜಿಎಸ್‌ಟಿ ಅನ್ವಯಿಸದೇ ಇದ್ದರೂ, 500 ರೂ. ಮೀರಿದ ಟಿಕೆಟ್‌ಗಳಿಗೆ ಮಾತ್ರ 18% ತೆರಿಗೆ ವಿಧಿಸಲಾಗುತ್ತದೆ. ಆದರೆ ಐಪಿಎಲ್‌ಗೆ ಮಾತ್ರ ಪ್ರತ್ಯೇಕ ತೆರಿಗೆ ಸ್ಲ್ಯಾಬ್ ನಿಗದಿಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಹೀಗಾಗಿ ಹೊಸ ಜಿಎಸ್‌ಟಿ ನೀತಿಯಿಂದ ಐಪಿಎಲ್ ವೀಕ್ಷಣೆ ಸಾಮಾನ್ಯ ಜನರಿಗೆ ಐಷಾರಾಮಿ ಅನುಭವವಾಗಿ ಪರಿಣಮಿಸುತ್ತಿದೆ.

ಇದನ್ನೂ ಓದಿ