June 13, 2026
Saturday, June 13, 2026
spot_img

ರಂಬುಟಾನ್ ಗೂ ಬಿತ್ತು ನಿಪಾ ಏಟು: ಹಠಾತ್ ಕುಸಿತಕಂಡ ಹಣ್ಣಿನ ಬೇಡಿಕೆ, ಕಂಗಾಲಾದ ಕೃಷಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ನಿಪಾ ವೈರಸ್ ಶಂಕಿತ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ರಂಬುಟಾನ್ ಹಣ್ಣಿನ ಬೇಡಿಕೆ ಹಠಾತ್ ಕುಸಿದಿದ್ದು, ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಕೇರಳದಲ್ಲಿ ರಂಬುಟಾನ್ ಕೃಷಿ ಗಣನೀಯವಾಗಿ ವಿಸ್ತರಿಸಿದೆ. ವಿಶೇಷವಾಗಿ ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ನಡುವೆ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಾಕಷ್ಟು ಹಣ್ಣುಗಳು ನೆಲಕ್ಕೆ ಉದುರಿದ್ದು, ಇದರ ನಡುವೆಯೇ ನಿಪಾ ಭೀತಿಯಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದು ರೈತರಿಗೆ ಮತ್ತಷ್ಟು ನಷ್ಟ ಉಂಟುಮಾಡಿದೆ.

ಇದನ್ನೂ ಓದಿ:

ರಂಬುಟಾನ್ ಹಣ್ಣಾಗುವ ಅವಧಿಯಲ್ಲಿ ಬಾವಲಿಗಳು ಮತ್ತು ಪಕ್ಷಿಗಳಿಂದ ರಕ್ಷಿಸಲು ರೈತರು ಮರಗಳಿಗೆ ಬಲೆಗಳನ್ನು ಅಳವಡಿಸುವಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಾರೆ. ಇದರ ನಡುವೆಯೂ ಸುರಕ್ಷತೆ ಕುರಿತ ಆತಂಕದಿಂದ ಗ್ರಾಹಕರು ರಂಬುಟಾನ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೆಳೆಗಾರರು ಹೇಳಿದ್ದಾರೆ.

ಕೇರಳದಲ್ಲಿ ರಬ್ಬರ್ ಕೃಷಿಯಿಂದ ರಂಬುಟಾನ್ ಬೆಳೆ ಕಡೆಗೆ ತಿರುಗಿರುವ ಅನೇಕ ರೈತರು ಈಗ ಮಾರುಕಟ್ಟೆ ಕುಸಿತದ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯವಾಗಿ ಮೇ ತಿಂಗಳಿಂದ ಮೂರು ತಿಂಗಳವರೆಗೆ ರಂಬುಟಾನ್ ಕೊಯ್ಲು ನಡೆಯುತ್ತಿದ್ದು, ಇದೇ ಅವಧಿಯಲ್ಲಿ ಮಾರಾಟ ಕುಂಠಿತವಾಗಿರುವುದು ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !