ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರಸಿದ್ಧ ತಾಣ ಯಾಣಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.
ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಯಾಣ ಪ್ರವಾಸಿ ಸ್ಥಳದಲ್ಲಿ ಭೂಕುಸಿತ ಆತಂಕ ಇದೆ. ಜೊತೆಗೆ ಚಂಡಿಕಾ ನದಿಯ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಪ್ರವಾಸಿಗರಿಗೆ ಯಾಣಕ್ಕೆ ತೆರಳದಂತೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ಕಳೆದ ಎರಡು ವರ್ಷದ ಹಿಂದೆ ಯಾಣದ ಬಳಿ ಭೂ ಕುಸಿತವಾಗಿತ್ತು. ಇದಲ್ಲದೇ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಸಹ ಮತ್ತೆ ಈ ಭಾಗದಲ್ಲಿ ಹೆಚ್ಚಿನ ಮಳೆಯಾದರೆ ಭೂಕುಸಿತವಾಗುವ ಎಚ್ಚರಿಕೆ ಸಹ ನೀಡಿತ್ತು. ಹೀಗಾಗಿ ಪ್ರವಾಸಿಗರ ಕ್ಷೇಮಕ್ಕಾಗಿ ಅರಣ್ಯ ಇಲಾಖೆ ಈ ರೀತಿ ಕ್ರಮ ಕೈಗೊಂಡಿದೆ.
ಪರಿಸ್ಥಿತಿ ಸುಧಾರಿಸುವವರೆಗೆ ಸಾರ್ವಜನಿಕರು ಯಾಣಕ್ಕೆ ಭೇಟಿ ನೀಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಹಾಗೂ ಶ್ರೀ ಮಹಾಗಣಪತಿ ಗ್ರಾಮ ಅರಣ್ಯ ಸಮಿತಿ ಯಾಣದ ವತಿಯಿಂದ ಹೊರಡಿಸಿರುವ ಸೂಚನೆಯಲ್ಲಿ, ನಿಷೇಧದ ಅವಧಿಯಲ್ಲಿ ಅಕ್ರಮವಾಗಿ ಪ್ರವೇಶಿಸುವವರ ವಿರುದ್ಧ ಅರಣ್ಯ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.



