ಮಳೆಗಾಲದ ತಂಪಾದ ಹವಾಮಾನವು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ, ಇದೇ ಸಮಯದಲ್ಲಿ ವಾತಾವರಣವು ತುಂಬಾ ತೇವಾಂಶದಿಂದ ಕೂಡಿರುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ವೇಗವಾಗಿ ಹರಡುತ್ತವೆ. ಪರಿಣಾಮವಾಗಿ ನೆಗಡಿ, ಕೆಮ್ಮು, ಜ್ವರ ಮತ್ತು ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುತ್ತದೆ. ಈ ಅವಧಿಯಲ್ಲಿ ಸಾಂಕ್ರಾಮಿಕ ರೋಗಗಳಿಂದ ದೂರವಿರಲು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿ ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಮಾಡಿಕೊಳ್ಳಬೇಕಾದ ಪ್ರಮುಖ ಬದಲಾವಣೆಗಳ ಬಗ್ಗೆ ತಿಳಿಯೋಣ.
ನೈಸರ್ಗಿಕ ಆ್ಯಂಟಿ-ಬಯೋಟಿಕ್ ಸಾಂಬಾರ ಪದಾರ್ಥಗಳು
ನಮ್ಮ ಭಾರತೀಯ ಅಡುಗೆಮನೆಯಲ್ಲಿರುವ ಸಾಂಬಾರ ಪದಾರ್ಥಗಳು ಕೇವಲ ರುಚಿಗಷ್ಟೇ ಅಲ್ಲ, ರೋಗನಿರೋಧಕ ಶಕ್ತಿ ಹೆಚ್ಚಿಸಲು ರಾಮಬಾಣವಾಗಿ ಕೆಲಸ ಮಾಡುತ್ತವೆ. ಅರಿಶಿನದಲ್ಲಿ ‘ಕುರ್ಕುಮಿನ್’ ಪ್ರಬಲ ಆ್ಯಂಟಿ-ಆಕ್ಸಿಡೆಂಟ್ ಆಗಿದ್ದು, ವೈರಲ್ ಸೋಂಕುಗಳ ವಿರುದ್ಧ ಹೋರಾಡುತ್ತದೆ. ದಿನವೂ ರಾತ್ರಿ ಮಲಗುವಾಗ ಬಿಸಿ ಹಾಲಿಗೆ ಸ್ವಲ್ಪ ಹಳದಿ ಸೇರಿಸಿ ಕುಡಿಯುವುದು ಒಳ್ಳೆಯದು. ಶುಂಠಿ ಮತ್ತು ಬೆಳ್ಳುಳ್ಳಿಯಲ್ಲಿ ಜಿಂಜರಾಲ್ ಮತ್ತು ಅಲಿಸಿನ್ ಅಂಶಗಳು ಗಂಟಲಿನ ಸೋಂಕು ಮತ್ತು ಶೀತವನ್ನು ದೂರ ಇಡುತ್ತವೆ. ಕಾಳುಮೆಣಸಿನಲ್ಲಿ ಕಫ ಮತ್ತು ಕೆಮ್ಮಿನ ಸಮಸ್ಯೆಗೆ ತಕ್ಷಣದ ಪರಿಹಾರ ನೀಡುತ್ತದೆ.
ವಿಟಮಿನ್ ಸಿ ಸಮೃದ್ಧವಾಗಿರುವ ಸಿಟ್ರಸ್ ಹಣ್ಣುಗಳು
ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸಲು ವಿಟಮಿನ್ ಸಿ ಅತ್ಯಗತ್ಯ. ಇದು ನೈಸರ್ಗಿಕವಾಗಿ ಸೋಂಕುಗಳನ್ನು ತಡೆಯುತ್ತದೆ. ದಿನನಿತ್ಯದ ಆಹಾರದಲ್ಲಿ ನೆಲ್ಲಿಕಾಯಿ, ಕಿತ್ತಳೆ, ಮೂಸಂಬಿ ಮತ್ತು ನಿಂಬೆಹಣ್ಣನ್ನು ನಿಯಮಿತವಾಗಿ ಬಳಸುವುದು ಉತ್ತಮ. ಮಳೆಗಾಲದಲ್ಲಿ ರಸ್ತೆಬದಿಯಲ್ಲಿ ಕತ್ತರಿಸಿಟ್ಟ ಹಣ್ಣುಗಳನ್ನು ತಿನ್ನಬಾರದು. ಮನೆಯಲ್ಲೇ ಚೆನ್ನಾಗಿ ತೊಳೆದು, ತಾಜಾವಾಗಿರುವಾಗಲೇ ಸೇವಿಸುವುದು ಒಳ್ಳೆಯದು.
ಬಿಸಿಬಿಸಿ ತರಕಾರಿ ಸೂಪ್‌ಗಳು
ಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿರುತ್ತದೆ. ಆದ್ದರಿಂದ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಹಾಗಾಗಿ ಕ್ಯಾರೆಟ್, ಬೀಟ್‌ರೂಟ್ ಅಥವಾ ಪಾಲಕ್ ಸೊಪ್ಪಿನ ಬಿಸಿಬಿಸಿ ಸೂಪ್‌ಗೆ ಸ್ವಲ್ಪ ಕಾಳುಮೆಣಸಿನ ಪುಡಿ ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಗಂಟಲಿನ ನೋವು ಕಡಿಮೆಯಾಗುತ್ತದೆ. ಹಾಗೆಯೇ ಹಸಿರು ಎಲೆ ತರಕಾರಿಗಳನ್ನು ಬಳಸುವಾಗ ಉಪ್ಪು ಮತ್ತು ಅರಿಶಿನ ಹಾಕಿದ ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು, ಪೂರ್ತಿಯಾಗಿ ಬೇಯಿಸಿ ತಿನ್ನಬೇಕು.
ಮೊಸರು ಮತ್ತು ಪ್ರೋಬಯೋಟಿಕ್ಸ್
ನಮ್ಮ ದೇಹದ ರೋಗನಿರೋಧಕ ಶಕ್ತಿಯ ಶೇ. 70 ರಷ್ಟು ಭಾಗ ನಮ್ಮ ಜೀರ್ಣಾಂಗವ್ಯೂಹದ ಆರೋಗ್ಯದ ಮೇಲೆಯೇ ಆಧಾರಿತವಾಗಿರುತ್ತದೆ. ಮೊಸರು ಅಥವಾ ಮಜ್ಜಿಗೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಯನ್ನು ಉತ್ತಮಪಡಿಸಿ, ಹೊಟ್ಟೆಯ ಸೋಂಕುಗಳನ್ನು ತಡೆಯುತ್ತವೆ. ಆದರೆ, ಫ್ರಿಡ್ಜ್‌ನಲ್ಲಿಟ್ಟ ತಣ್ಣನೆಯ ಮೊಸರನ್ನು ಬಳಸಬಾರದು.



