ಹೊಸದಿಗಂತ ವರದಿ ಬಳ್ಳಾರಿ:
ಸ್ವಾತಂತ್ರ್ಯ ದಿನಾಚರಣೆ ಹಾಗೂ ವಂದೇ ಮಾತರಂ ಗೆ150ನೇ ವರ್ಷದ ಸಂಭ್ರಮದ ನಿಮಿತ್ತ ಎಬಿವಿಪಿ ಬಳ್ಳಾರಿ (ಕರ್ನಾಟಕ ಉತ್ತರ ಪ್ರಾಂತ) ವತಿಯಿಂದ 450 ಮೀಟರ್ ಉದ್ದದ ತಿರಂಗ ಯಾತ್ರೆಯನ್ನು ಬುಧವಾರ ಆಯೋಜಿಸಲಾಗಿತ್ತು.
ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಈ ತಿರಂಗ ಯಾತ್ರೆಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ ಗಮನಸೆಳೆದರು. ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ ದೇವಸ್ಥಾನದ ಆವರಣದಿಂದ ಪ್ರಾರಂಭವಾದ ಯಾತ್ರೆ, ನಗರದ ರಾಯಲ್ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ, ಮೋತಿ ವೃತ್ತದ ಬಳಿ ತಲುಪಿತು. ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಎಬಿವಿಪಿ ಕಾರ್ಯಕರ್ತರು ಭಾಗವಹಿಸಿ, ದೇಶಭಕ್ತಿಯ ನಾನಾ ಘೋಷಣೆಗಳೊಂದಿಗೆ ತಿರಂಗ ಯಾತ್ರೆಯನ್ನು ಅತ್ಯಂತ ಅದ್ದೂರಿಯಾಗಿ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಸಚಿನ ಕುಳಿಗೇರಿ, ವಿಭಾಗ ಸಂಚಾಲಕ ದಿಲೀಪ್ ಕುಮಾರ್, ನಗರ ಕಾರ್ಯದರ್ಶಿ ಬಸವ ಕಿರಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿ.ಭರತ್, ನಗರ ಸಂಘಟನಾ ಕಾರ್ಯದರ್ಶಿ ಸಂದೀಪ್, ಜಿಲ್ಲಾ ಸಂಚಾಲಕ ಸಪ್ತಗಿರಿ, ನಗರ ಸಹ ಕಾರ್ಯದರ್ಶಿ ಮಾರುತಿ, ಕಾರ್ಯಕರ್ತರಾದ ಹರ್ಷಿತ್ ರೆಡ್ಡಿ, ಕಿಶೋರ್, ದರ್ಶನ್, ಸಾಗರ್, ವಿದ್ಯಾ, ರಮ್ಯಾ ಸೇರಿದಂತೆ ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.



