ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ಕೇರಳ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಿಯದರ್ಶಿನಿ’ ಯೋಜನೆ ಜೂ.15ರಿಂದ ಕಾಸರಗೋಡು ಜಿಲ್ಲೆಯಲ್ಲೂ ಜಾರಿಯಾಗಲಿದೆ. ಈ ಮೂಲಕ ಯೋಜನೆಯಡಿ ಜಿಲ್ಲೆಯ 75 ಕೆಎಸ್‌ಆರ್‌ಟಿಸಿ ಬಸ್ ಸೇವೆಗಳಲ್ಲಿ ಮಹಿಳೆಯರು ನಾಳೆ ಬೆಳಿಗ್ಗೆ 9 ಗಂಟೆಯಿಂದ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಈ ಯೋಜನೆಯ ವಿಶೇಷತೆಯೆಂದರೆ, ಕಾಸರಗೋಡು-ಮಂಗಳೂರು, ಕಾಸರಗೋಡು-ಸುಳ್ಯ ಹಾಗೂ ಕಾಸರಗೋಡು-ಪುತ್ತೂರು ಅಂತರರಾಜ್ಯ ಮಾರ್ಗಗಳಲ್ಲಿ ಸಂಚರಿಸುವ ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೂ ಉಚಿತ ಪ್ರಯಾಣ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೆ, ಟೌನ್-ಟು-ಟೌನ್, ಲಿಮಿಟೆಡ್ ಸ್ಟಾಪ್ ಮತ್ತು ಆರ್ಡಿನರಿ ಬಸ್ ಸೇವೆಗಳಿಗೂ ಯೋಜನೆಯನ್ನು ವಿಸ್ತರಿಸಲಾಗಿದ್ದು, ಹೆಚ್ಚಿನ ಮಹಿಳಾ ಪ್ರಯಾಣಿಕರು ಇದರ ಪ್ರಯೋಜನ ಪಡೆಯಲಿದ್ದಾರೆ.
ಇದನ್ನೂ ಓದಿ:
ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ಪ್ರತಿದಿನ ಮುಂಜಾನೆ 4 ಗಂಟೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗುತ್ತಿದ್ದು, ದಿನಕ್ಕೆ ನೂರಕ್ಕೂ ಹೆಚ್ಚು ಸುತ್ತು ಸಂಚಾರ ನಡೆಸಲಾಗುತ್ತಿದೆ. ಮಂಗಳೂರು, ಪುತ್ತೂರು ಹಾಗೂ ಸುಳ್ಯ ಭಾಗಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪ್ರತಿದಿನ ಸಂಚರಿಸುವ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಉದ್ಯೋಗಿಗಳಿಗೆ ಈ ಯೋಜನೆ ಆರ್ಥಿಕವಾಗಿ ನೆರವಾಗಲಿದೆ.



