ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಕೆಂಪುಕೋಟೆ ಆವರಣದಲ್ಲಿ ನಡೆದ ಜೈನರ ಧಾರ್ಮಿಕ ಕಾರ್ಯಕ್ರಮದ ವೇಳೆ ಅಚ್ಚರಿಯ ಘಟನೆ ನಡೆದಿದೆ. ಅರ್ಚಕನ ವೇಷದಲ್ಲಿ ಬಂದ ಕಳ್ಳ, ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಎರಡು ಚಿನ್ನದ ಕಲಶ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಕಳವು ಮಾಡಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಪೊಲೀಸರು ಆರೋಪಿಯನ್ನು ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಕಳ್ಳತನಗೊಂಡ ವಸ್ತುಗಳಲ್ಲಿ ಎರಡು ಚಿನ್ನದ ಕಲಶ, 760 ಗ್ರಾಂ ತೂಕದ ಚಿನ್ನದ ತೆಂಗಿನಕಾಯಿ ಮಾದರಿ ವಸ್ತು, ವಜ್ರ, ರತ್ನ, ಮಾಣಿಕ್ಯಗಳಿಂದ ಅಲಂಕರಿಸಲಾದ 115 ಗ್ರಾಂ ತೂಕದ ಸಣ್ಣ ಚಿನ್ನದ ಕಲಶ ಸೇರಿವೆ. ಈ ವಸ್ತುಗಳೆಲ್ಲವೂ ಉದ್ಯಮಿ ಸುಧೀರ್ ಜೈನ್ ಅವರಿಗೆ ಸೇರಿದವು. ಪ್ರತಿದಿನ ಪೂಜಾ ಕೈಂಕರ್ಯ ಮತ್ತು ಧಾರ್ಮಿಕ ಆಚರಣೆಗಳಿಗಾಗಿ ಅವರು ಈ ಅಮೂಲ್ಯ ವಸ್ತುಗಳನ್ನು ತರಿಸುತ್ತಿದ್ದರು ಎಂದು ತಿಳಿದುಬಂದಿದೆ.
ಜೈನ ಸಮುದಾಯದಲ್ಲಿ ಈ ವಸ್ತುಗಳನ್ನು ಪೂಜಾ ಸಂದರ್ಭದಲ್ಲಿ ಬಳಸುವುದು ಪವಿತ್ರ ಹಾಗೂ ಶ್ರೇಷ್ಠವೆಂದು ನಂಬಿಕೆ ಇದೆ. ಆದರೆ ಭದ್ರತೆಯ ನಡುವೆಯೇ ನಡೆದ ಈ ಕಳ್ಳತನವು ಭಕ್ತರಲ್ಲಿ ಆತಂಕ ಮೂಡಿಸಿದೆ.