June 17, 2026
Wednesday, June 17, 2026
spot_img

ಸತೀಶ್ ಜಾರಕಿಹೊಳಿ ವಿರುದ್ಧದ ಹೇಳಿಕೆಗೆ ಆಕ್ರೋಶ: ರಾಸಿಂಗೆ ಉಚ್ಛಾಟನೆಗೆ ದಲಿತ ಮುಖಂಡರ ಒತ್ತಾಯ

ಹೊಸದಿಗಂತ ವರದಿ ಬೆಳಗಾವಿ:

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಅಂಬೇಡ್ಕರ್ ಜನಜಾಗೃತಿ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಜಯರಾಮ ರಾಸಿಂಗೆ ಅವರನ್ನು ತಕ್ಷಣವೇ ಸಂಘಟನೆಯಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕೆಂದು ಬೆಳಗಾವಿಯ ಪ್ರಮುಖ ದಲಿತ ಮುಖಂಡರು ಆಗ್ರಹಿಸಿದರು.

‘ಸತೀಶ್ ಜಾರಕಿಹೊಳಿ ರಾಷ್ಟ್ರ ಮಟ್ಟದ ನಾಯಕ

ಸೋಮವಾರ ನಗರದ ಸರ್ಕಿಟ್ ಹೌಸ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದಲಿತ ಮುಖಂಡರು, ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ ತಮ್ಮ ನಾಯಕರ ವಿರುದ್ಧ ಹಗುರವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದರು. ಸತೀಶ್ ಜಾರಕಿಹೊಳಿ ಅವರು ಕೇವಲ ಜಿಲ್ಲೆಯ ನಾಯಕನಲ್ಲ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕರು. ದಲಿತ ಸಮಾಜ ಮತ್ತು ಸಂಘಟನೆಗಳ ಬಗ್ಗೆ ಅವರಿಗೆ ಅಪಾರ ಗೌರವವಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ರಾಸಿಂಗೆಗೆ ಸಮಾಜದ ಜೊತೆ ಸಂಬಂಧವಿಲ್ಲ

ಮಲ್ಲಿಕಾರ್ಜುನ ರಾಸಿಂಗೆ ಅವರ ವಿವಾದಾತ್ಮಕ ಹೇಳಿಕೆ ದಲಿತ ಸಂಘಟನೆಗಳ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅವರಿಗೆ ಚಲುವಾದಿ ಸಮಾಜದೊಂದಿಗೆ ಯಾವುದೇ ಸಂಬಂಧವಿಲ್ಲ. ಕಳೆದ ನಾಲ್ಕು ದಶಕಗಳಲ್ಲಿ ಇಂತಹ ಕೀಳು ಮಟ್ಟದ ಘಟನೆಗಳು ನಡೆದಿಲ್ಲ ಎಂದು ಮುಖಂಡರು ಆರೋಪಿಸಿದರು.

ಷಡ್ಯಂತ್ರದ ಆರೋಪ

ಮುಖಂಡರಾದ ಮಹಾವೀರ ಮೋಹಿತೆ ಹಾಗೂ ಮಲ್ಲೇಶ ಚೌಗಲಾ ಮಾತನಾಡಿ, ಪ್ರಭಾವಿ ದಲಿತ ನಾಯಕರನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನಗಳು ನಡೆಯುತ್ತಿವೆ. ರಾಸಿಂಗೆ ಅವರ ಹೇಳಿಕೆಯ ಹಿಂದೆ ಯಾರ ಕೈವಾಡವಿದೆ ಎಂಬುದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಸಿಂಗೆ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಸುನೀತಾ ಐಹೊಳೆ, ಕೆಂಪ್ಪಣ್ಣ ಸಿರಹಟ್ಟಿ, ಮಹಾದೇವ ತಳವಾರ, ಬಾಹುಸಾಬ ಪಾಂಡರೆ, ವಿಕ್ರಂ ಕರನಿಂಗ, ಸಂಜೀವ ಕಾಂಬಳೆ, ಶಾನುರ ತಹಶೀಲ್ದಾರ್ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !