ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಈ ವರ್ಷದ ನೈಋತ್ಯ ಮುಂಗಾರು ಆರಂಭದಲ್ಲೇ ನಿರಾಸೆ ಮೂಡಿಸಿದೆ. ಜೂನ್ 1 ರಿಂದ ಜೂನ್ 15 ರವರೆಗಿನ ಮೊದಲ ಹದಿನೈದು ದಿನಗಳಲ್ಲಿ ಕರ್ನಾಟಕ ಒಟ್ಟಾರೆ ಶೇಕಡಾ 21 ರಷ್ಟು ಮಳೆ ಕೊರತೆ ಎದುರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಅಭಾವ
ಸಾಮಾನ್ಯವಾಗಿ ಅತಿ ಹೆಚ್ಚು ಮಳೆ ಪಡೆಯುವ ಕರಾವಳಿ ಮತ್ತು ಮಲೆನಾಡು ಭಾಗದಲ್ಲೇ ಈ ಬಾರಿ ಭಾರಿ ಹಿನ್ನಡೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಶೇ. 41 ರಷ್ಟು ಮತ್ತು ಮಲೆನಾಡಿನಲ್ಲಿ ಶೇ. 36 ರಷ್ಟು ಮಳೆ ಅಭಾವ ಸೃಷ್ಟಿಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಜೂನ್ 4 ರಂದು ಮುಂಗಾರು ಪ್ರವೇಶಿಸಿದ್ದರೂ, ನಿರೀಕ್ಷಿತ 85.5 ಮಿಮೀ ಬದಲಿಗೆ ಕೇವಲ 67 ಮಿಮೀ ಮಳೆಯಾಗಿದೆ.
ದುರ್ಬಲ ಮಾರುತಗಳಿಗೆ ಕಾರಣವೇನು?
ಎಲ್ ನಿನೋ ವಿದ್ಯಮಾನದ ಪ್ರಭಾವದಿಂದಾಗಿ ಮುಂಗಾರು ಮಾರುತಗಳು ತೀವ್ರವಾಗಿ ದುರ್ಬಲಗೊಂಡಿವೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಎನ್. ಪುವಿಯರಸನ್ ತಿಳಿಸಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಯಾವುದೇ ವಾಯುಭಾರ ಕುಸಿತದ ಲಕ್ಷಣಗಳಿಲ್ಲದ ಕಾರಣ ಕರಾವಳಿಯಲ್ಲಿ ಒಣಹವೆ ಮುಂದುವರಿದಿದೆ.
ರಾಜ್ಯದಲ್ಲಿ ಮುಂದುವರಿದ ಬೇಸಿಗೆಯ ಬಿಸಿಲು
ಮಳೆಗಾಲ ಆರಂಭವಾಗಬೇಕಿದ್ದರೂ ರಾಜ್ಯದ ಶೇ. 82 ರಷ್ಟು ಭಾಗದಲ್ಲಿ 30 ರಿಂದ 36 ಡಿಗ್ರಿ ಸೆಲ್ಶಿಯಸ್ ತಾಪಮಾನವಿದೆ. ಇನ್ನು ಉತ್ತರ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಕೊಪ್ಪಳ, ಬಳ್ಳಾರಿ, ಬೆಳಗಾವಿ, ವಿಜಯಪುರ ಮತ್ತು ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 38 ರಿಂದ 40.5 ಡಿಗ್ರಿ ಸೆಲ್ಶಿಯಸ್ ವರೆಗೆ ದಾಖಲಾಗುತ್ತಿದ್ದು, ಜನರಿಗೆ ಬೇಸಿಗೆಯ ಅನುಭವವೇ ಆಗುತ್ತಿದೆ.



