June 16, 2026
Tuesday, June 16, 2026
spot_img

ಶೀಘ್ರ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಸಂಚಲನ ಮೂಡಿಸಿದೆ ಬ್ರಿಟನ್ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದಲಾಗುತ್ತಿರುವ ಡಿಜಿಟಲ್ ಜಗತ್ತಿನ ಮಧ್ಯೆ ಬ್ರಿಟನ್ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.

ತಮ್ಮ ದೇಶದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಪ್ರಮುಖ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವುದಾಗಿ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಘೋಷಿಸಿದ್ದಾರೆ. ಈ ನಿರ್ಧಾರವು ಮುಂದಿನ ವರ್ಷದಿಂದ ಜಾರಿಗೆ ಬರಲಿದ್ದು, ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.

ಈ ಬಗ್ಗೆ ಮಾತನಾಡಿರುವ ಸ್ಟಾರ್ಮರ್, ದೇಶದ ಪ್ರಧಾನಿಯಾಗಿ ಮಾತ್ರವಲ್ಲ, ಇಬ್ಬರು ಮಕ್ಕಳ ತಂದೆಯಾಗಿಯೂ ಇದು ನನ್ನ ಅತ್ಯುತ್ತಮ ನಿರ್ಧಾರ ಎಂದು ಹೇಳಿದ್ದಾರೆ. ಮಕ್ಕಳ ಸಂತೋಷ, ಸುರಕ್ಷತೆ ಮತ್ತು ಆರೋಗ್ಯಕರ ಬಾಲ್ಯಕ್ಕಾಗಿ ಸರ್ಕಾರ ತಂತ್ರಜ್ಞಾನ ಕಂಪನಿಗಳಿಗಿಂತ ಕುಟುಂಬಗಳ ಪರ ನಿಂತಿದೆ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.

ಯಾವ ಯಾವ ವೇದಿಕೆಗಳಿಗೆ ನಿಷೇಧ?

ಹೊಸ ನಿಯಮ ಜಾರಿಗೆ ಬಂದರೆ ಟಿಕ್‌ಟಾಕ್, ಇನ್‌ಸ್ಟಾಗ್ರಾಂ, ಸ್ನಾಪ್‌ಚಾಟ್, ಯೂಟ್ಯೂಬ್, ಫೇಸ್‌ಬುಕ್ ಮತ್ತು ಎಕ್ಸ್ (ಹಿಂದಿನ ಟ್ವಿಟರ್) ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ 16 ವರ್ಷದೊಳಗಿನ ಮಕ್ಕಳು ಖಾತೆ ತೆರೆಯಲು ಅಥವಾ ಬಳಸಲು ಅವಕಾಶ ಇರುವುದಿಲ್ಲ. ಆದರೆ ಎಲ್ಲ ಡಿಜಿಟಲ್ ವೇದಿಕೆಗಳಿಗೂ ಈ ನಿಯಮ ಅನ್ವಯಿಸುವುದಿಲ್ಲ. ವಾಟ್ಸ್‌ಆಪ್ ಮತ್ತು ಸಿಗ್ನಲ್‌ಗಳಂತಹ ಸಂದೇಶ ವಿನಿಮಯ ಅಪ್ಲಿಕೇಶನ್‌ಗಳಿಗೆ ಸದ್ಯ ವಿನಾಯಿತಿ ನೀಡಲಾಗಿದೆ. ಜೊತೆಗೆ, ಮಕ್ಕಳೊಂದಿಗೆ ಅಪರಿಚಿತರು ಸಂಪರ್ಕ ಸಾಧಿಸುವ ಅವಕಾಶ ಇರುವ ಗೇಮಿಂಗ್ ವೇದಿಕೆಗಳು ಮತ್ತು ಲೈವ್ ಸ್ಟ್ರೀಮಿಂಗ್ ಸೇವೆಗಳಲ್ಲಿ ಕಠಿಣ ವಯಸ್ಸು ದೃಢೀಕರಣ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಯೋಜಿಸಿದೆ.

ಇಷ್ಟು ಕಠಿಣ ನಿರ್ಧಾರ ಯಾಕೆ?

ಕಳೆದ ಕೆಲವು ವರ್ಷಗಳಲ್ಲಿ ಬ್ರಿಟನ್‌ನಲ್ಲಿ ಮಕ್ಕಳ ಮೇಲೆ ಸಾಮಾಜಿಕ ಜಾಲತಾಣಗಳ ಪರಿಣಾಮದ ಕುರಿತು ಹಲವು ಅಧ್ಯಯನಗಳು ಮತ್ತು ಸಾರ್ವಜನಿಕ ಚರ್ಚೆಗಳು ನಡೆದಿವೆ.
ಸೈಬರ್ ಬುಲ್ಲಿಯಿಂಗ್, ಅಶ್ಲೀಲ ಮತ್ತು ಹಿಂಸಾತ್ಮಕ ವಿಷಯಗಳು, ಅಪರಿಚಿತರ ಸಂಪರ್ಕ, ನಿದ್ರಾಹೀನತೆ, ಓದಿನ ಮೇಲೆ ಪರಿಣಾಮ ಮತ್ತು ಸೋಷಿಯಲ್ ಮೀಡಿಯಾ ವ್ಯಸನದ ಬಗ್ಗೆ ಸಾವಿರಾರು ಪೋಷಕರು ಕಳವಳ ವ್ಯಕ್ತಪಡಿಸಿದ್ದರು. ಸರ್ಕಾರ ನಡೆಸಿದ ಸಮಾಲೋಚನೆಯಲ್ಲಿ ಭಾಗವಹಿಸಿದ್ದ ಬಹುತೇಕ ಪೋಷಕರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನಿರ್ಬಂಧ ಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲರೂ ಈ ನಿರ್ಧಾರ ಒಪ್ಪಿಕೊಂಡಿದ್ದಾರೆಯೇ?

ಇಲ್ಲ.
ಕೆಲವು ತಂತ್ರಜ್ಞಾನ ಕಂಪನಿಗಳು ಮತ್ತು ತಜ್ಞರು ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಸಂಪೂರ್ಣ ನಿಷೇಧವು ಮಕ್ಕಳನ್ನು ಇನ್ನಷ್ಟು ನಿಯಂತ್ರಣವಿಲ್ಲದ ಮತ್ತು ಅಪಾಯಕಾರಿ ಆನ್‌ಲೈನ್ ವೇದಿಕೆಗಳತ್ತ ತಳ್ಳಬಹುದು ಎಂಬ ವಾದವನ್ನು ಅವರು ಮುಂದಿಟ್ಟಿದ್ದಾರೆ. ಇನ್ನೂ ಕೆಲವರು, ಮಕ್ಕಳು VPN ಅಥವಾ ಬೇರೆ ತಾಂತ್ರಿಕ ಮಾರ್ಗಗಳ ಮೂಲಕ ಈ ನಿಯಮವನ್ನು ತಪ್ಪಿಸಿಕೊಳ್ಳಬಹುದು ಎಂದು ಹೇಳುತ್ತಿದ್ದಾರೆ. ಕೆಲವು ಸಂಶೋಧಕರು ವಯಸ್ಸು ಆಧಾರಿತ ನಿರ್ಬಂಧ ಮಾತ್ರ ಸಮಸ್ಯೆಗೆ ಪೂರ್ಣ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !