June 17, 2026
Wednesday, June 17, 2026
spot_img

ಸಾರಿಗೆ ಬಸ್, ಇಚರ್ ಗೂಡ್ಸ್‌ ವಾಹನದ ನಡುವೆ ಭೀಕರ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾ*ವು

ಹೊಸದಿಗಂತ ವರದಿ ವಿಜಯಪುರ:

ಸಾರಿಗೆ ಬಸ್ ಹಾಗೂ ಇಚರ್ ಗೂಡ್ಸ್ ವಾಹನ ನಡುವೆ ಭೀಕರ ಅಪಘಾತವಾಗಿ ಚಾಲಕರಿಬ್ಬರು ಸೇರಿ ಮೂವರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಜಿಲ್ಲೆ ಚಡಚಣ ತಾಲೂಕಿನ ಲೋಣಿ ಕ್ರಾಸ್ ಬಳಿ ನಡೆದಿದೆ.

ಮೃತಪಟ್ಟವರನ್ನು ಇಚರ್ ವಾಹನ ಚಾಲಕ ಅಶೋಕ ಉಟಗಿ (28) ಹಾಗೂ ಪತ್ನಿ ರಾಧಾಬಾಯಿ ಅಶೋಕ ಉಟಗಿ (26) ಹಾಗೂ ಸಾರಿಗೆ ಬಸ್ ಚಾಲಕ ಹನುಮಂತ ಚಲವಾದಿ (50) ಎಂದು ಗುರುತಿಸಲಾಗಿದೆ. ಚಡಚಣದತ್ತ ಹೊರಟಿದ್ದ ಇಚರ್ ಗೂಡ್ಸ್ ವಾಹನದ ಟೈಯರ್ ಸ್ಫೋಟಗೊಂಡ ವೇಳೆ, ಚಡಚಣದಿಂದ ಬರುತ್ತಿದ್ದ ಸಾರಿಗೆ ಬಸ್ ಗೆ ಡಿಕ್ಕಿಯಾಗಿ, ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಅಪಘಾತದ ತೀವ್ರತೆಗೆ ಇಚರ್ ವಾಹನದಲ್ಲಿದ್ದ ಚಾಲಕ ಹಾಗೂ ಆತನ ಪತ್ನಿ, ಸಾರಿಗೆ ಬಸ್ ಚಾಲಕನಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೂವರು ಅಸುನೀಗಿದ್ದಾರೆ. ಇನ್ನು ಬಸ್ ನಲ್ಲಿ ಇದ್ದ 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಪಿಎಸ್ಐ ಸೊಮೇಶ ಗೆಜ್ಜಿ ಹಾಗೂ ಸಿಬ್ಬಂದಿಗಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !