June 17, 2026
Wednesday, June 17, 2026
spot_img

ರಾಂಚಿಯ ಪಂಚತಾರಾ ಹೋಟೆಲ್‌ನಲ್ಲಿ ಎನ್‌ಡಿಎ ಶಾಸಕರ ವಾಸ್ತವ್ಯ: ಇಂಡಿಯಾ ಕೂಟದಿಂದಲೂ ಭರ್ಜರಿ ರಣತಂತ್ರ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜೂನ್ 18 ರಂದು ನಡೆಯಲಿರುವ ಜಾರ್ಖಂಡ್‌ನ ಎರಡು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಮುನ್ನ, ಬಿಜೆಪಿಯ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ತನ್ನ ಶಾಸಕರನ್ನು ಒಟ್ಟಾಗಿ ಇಟ್ಟುಕೊಳ್ಳಲು ರಾಂಚಿಯ ಪಂಚತಾರಾ ಹೋಟೆಲ್‌ಗೆ ಸ್ಥಳಾಂತರಿಸಿದೆ. ಇದರಿಂದಾಗಿ ಈ ಹೋಟೆಲ್ ಸದ್ಯ ರಾಜಕೀಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ.

ಆಡಳಿತಾರೂಢ ಇಂಡಿಯಾ ಮೈತ್ರಿಕೂಟವು ಜೆಎಮ್‌ಎಮ್‌ನ ಬೈದ್ಯನಾಥ್ ರಾಮ್ ಮತ್ತು ಕಾಂಗ್ರೆಸ್‌ನ ಪ್ರಣವ್ ಝಾರನ್ನು ಕಣಕ್ಕಿಳಿಸಿದ್ದರೆ, ಎನ್‌ಡಿಎ ಮೈತ್ರಿಕೂಟವು ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ವಾಮಿಯನ್ನು ಬೆಂಬಲಿಸುತ್ತಿದೆ. ಜೆಎಮ್‌ಎಮ್‌ನ 34 ಶಾಸಕರ ಬಲದೊಂದಿಗೆ ಬೈದ್ಯನಾಥ್ ರಾಮ್ ಸುಲಭವಾಗಿ ಗೆಲ್ಲುವ ನಿರೀಕ್ಷೆಯಿದೆ. ಆದರೆ, ಎರಡನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಗೆಲುವಿಗಾಗಿ ಹೆಚ್ಚುವರಿ ಮತಗಳನ್ನು ಅವಲಂಬಿಸಿವೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಕ್ರಾಸ್ ವೋಟಿಂಗ್ ಅಥವಾ ಪಕ್ಷಾಂತರ ನಡೆಯದಂತೆ ತಡೆಯಲು ಎರಡೂ ಮೈತ್ರಿಕೂಟಗಳು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಸರತ್ತು ನಡೆಸುತ್ತಿವೆ.

ಎನ್‌ಡಿಎ ಪಾಳಯದ ಪಂಚತಾರಾ ರಾಜಕಾರಣ

ತಮ್ಮ ಶಾಸಕರು ಕೈತಪ್ಪಿ ಹೋಗದಂತೆ ತಡೆಯಲು ಎನ್‌ಡಿಎ ‘ರೆಸಾರ್ಟ್ ರಾಜಕಾರಣ’ಕ್ಕೆ ಶರಣಾಗಿದೆ. ಎನ್‌ಡಿಎ ಮೈತ್ರಿಕೂಟದ ಎಲ್ಲಾ 24 ಶಾಸಕರನ್ನು ನಾಳೆಯವರೆಗೆ ‘ರಾಡಿಸನ್ ಬ್ಲೂ’ ಹೋಟೆಲ್‌ನಲ್ಲಿಯೇ ಉಳಿಯುವಂತೆ ಸೂಚಿಸಲಾಗಿದೆ.  ನಾಳೆ ಜೂನ್ 18 ರಂದು ಶಾಸಕರು ಇದೇ ಹೋಟೆಲ್‌ನಿಂದ ನೇರವಾಗಿ ಬಂದು ಮತ ಚಲಾಯಿಸಲಿದ್ದಾರೆ.

ಸೋಮವಾರ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಗೆ ಹಿರಿಯ ನಾಯಕರಾದ ಚಂಪೈ ಸೊರೆನ್ ಮತ್ತು ಸರ್ಯೂ ರಾಯ್ ಸೇರಿದಂತೆ ಏಳು ಎನ್‌ಡಿಎ ಶಾಸಕರು ಗೈರುಹಾಜರಾದ ಬೆನ್ನಲ್ಲೇ ಮೈತ್ರಿಕೂಟವು ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಇದರ ನಡುವೆ, ಎನ್‌ಡಿಎ ಮೈತ್ರಿಕೂಟದ ಮೂವರು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿರುವುದು ಕ್ರಾಸ್ ವೋಟಿಂಗ್ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಮಂಗಳವಾರ ಬೆಳಿಗ್ಗೆಯಿಂದಲೇ ಶಾಸಕರು ಹೋಟೆಲ್‌ಗೆ ಬರಲಾರಂಭಿಸಿದ್ದು, ಬರ್ಕಾಗಾಂವ್ ಶಾಸಕ ರೋಷನ್ ಲಾಲ್ ಚೌಧರಿ ಮೊದಲಿಗರಾಗಿ ಆಗಮಿಸಿದರು. ತಾವು ಎರಡು ದಿನಗಳಿಗೆ ಬೇಕಾದ ಬಟ್ಟೆಗಳನ್ನು ತಂದಿದ್ದು, ಮತದಾನದ ತರಬೇತಿ ಸಭೆಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದರು. ಹಿರಿಯ ಬಿಜೆಪಿ ನಾಯಕ ಪ್ರದೀಪ್ ವರ್ಮಾ ಮಾತನಾಡಿ, ಈ ವ್ಯವಸ್ಥೆಯಿಂದ ಎನ್‌ಡಿಎ ಶಾಸಕರು ಒಟ್ಟಿಗೆ ಇರಲು ಮತ್ತು ಸಮಯ ಕಳೆಯಲು ಸಾಧ್ಯವಾಗುತ್ತದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ, ವಿಕ್ಟರಿ ಸಿಂಬಲ್ ಪ್ರದರ್ಶಿಸಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್  ಶಾಸಕ ನಿರ್ಮಲ್ ಮಹತೋ ಮತ್ತು ಲೋಕ ಜನಶಕ್ತಿ ಪಕ್ಷದ ಶಾಸಕ ಜನಾರ್ದನ್ ಪಾಸ್ವಾನ್ ಕೂಡ ಹೋಟೆಲ್‌ನಲ್ಲಿದ್ದಾರೆ.

ಇದನ್ನೂ ಓದಿ:

 ಮುಖ್ಯಮಂತ್ರಿ ನಿವಾಸದಲ್ಲಿ ಇಂಡಿಯಾ ಕೂಟದ ಸಭೆ

ಇನ್ನೊಂದೆಡೆ, ಆಡಳಿತಾರೂಢ ಮೈತ್ರಿಕೂಟವನ್ನು ಬೆಂಬಲಿಸುವ 56 ಶಾಸಕರನ್ನು ರಾಂಚಿಯಲ್ಲೇ ಉಳಿಯಲು ಸೂಚಿಸಲಾಗಿದ್ದು, ಇಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ನಿವಾಸದಲ್ಲಿ ನಡೆಯುವ ಸಭೆಗಳಿಗೆ ಹಾಜರಾಗಲು ತಿಳಿಸಲಾಗಿದೆ. ಬೈದ್ಯನಾಥ್ ರಾಮ್ ಮತ್ತು ಪ್ರಣವ್ ಝಾ ಗೆಲುವನ್ನು ಖಚಿತಪಡಿಸಿಕೊಳ್ಳಲು ಇಂಡಿಯಾ ಕೂಟದ ಶಾಸಕರು ರಾತ್ರಿ ಭೋಜನದ ವೇಳೆಯಲ್ಲಿ ವಿಶೇಷ ಕಾರ್ಯತಂತ್ರದ ಸಭೆಗಳನ್ನು ನಡೆಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !