September 27, 2026
Sunday, September 27, 2026
spot_img

ಇಸ್ಕಾನ್‌ ದೇವಾಲಯದ ಹೊರಗೆ ಇಟ್ಟಿದ್ದ ಕೂಲರ್‌ನಿಂದ ವಿದ್ಯುತ್‌ ಪ್ರವಹಿಸಿ ಯುವಕ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಪವಿತ್ರ ಯಾತ್ರಾ ಸ್ಥಳವಾದ ವೃಂದಾವನದ ಇಸ್ಕಾನ್‌ ದೇವಾಲಯದ ಬಳಿ ದುರ್ಘಟನೆಯೊಂದು ಸಂಭವಿಸಿದೆ. ದೇವಸ್ಥಾನದ ಹೊರಗೆ ಅಳವಡಿಸಲಾಗಿದ್ದ ಕೂಲರ್‌ ಮುಟ್ಟಿದ ಯುವಕನೊಬ್ಬ ವಿದ್ಯುತ್‌ ಪ್ರವಹಿಸಿ ಮೃತಪಟ್ಟಿದ್ದಾನೆ.

ಮಧ್ಯಪ್ರದೇಶದ ಛತ್ತರ್‌ಪುರ ನಿವಾಸಿಯಾದ ಅಭಿಗ್ಯಾನ್ ಗುಪ್ತಾ ಎಂಬ ಯುವಕ ಸೋಮವಾರ ಬೆಳಗ್ಗೆ ತನ್ನ ತಂದೆ ಅಮಿತ್ ಕುಮಾರ್ ಗುಪ್ತಾ ಅವರೊಂದಿಗೆ ವೃಂದಾವನಕ್ಕೆ ಬಂದಿದ್ದರು. ಬೆಳಗ್ಗೆ 10.30 ರ ಸುಮಾರಿಗೆ ಇಸ್ಕಾನ್ ದೇವಾಲಯದ ಶೂ ಸ್ಟ್ಯಾಂಡ್ ಬಳಿ ಅವರಿಬ್ಬರೂ ತಮ್ಮ ಪಾದರಕ್ಷೆಗಳನ್ನು ಬಿಚ್ಚುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕೂಲರ್‌ನ್ನು ಮಿಸ್‌ ಆಗಿ ಅಭಿಗ್ಯಾನ್‌ ಮುಟ್ಟಿದ್ದಾರೆ.

ಕೂಲರ್‌ನಲ್ಲಿ ತಾಂತ್ರಿಕ ದೋಷವಿದ್ದ ಕಾರಣ ತಕ್ಷಣ ಶಾಕ್‌ ಹೊಡೆದಿದೆ. ಅಭಿಗ್ಯಾನ್‌ ಜೋರಾಗಿ ಕಿರುಚಿಕೊಂಡಿದ್ದಾರೆ. ತಕ್ಷಣ ತಂದೆ ಮಗನನ್ನು ರಕ್ಷಿಸಲು ಹೋಗಿದ್ದಾರೆ. ಆತನನ್ನು ಮುಟ್ಟಲು ಹೋದ ತಂದೆಗೂ ಶಾಕ್‌ ಹೊಡೆದು ದೂರ ಬಿದ್ದಿದ್ದಾರೆ.ನಂತರ ಸ್ಥಳೀಯರು ಹಾಗೂ ಇತರ ಭಕ್ತರು ಒಟ್ಟಾಗಿ ಆತನನ್ನು ಯಂತ್ರದಿಂದ ಬೇರ್ಪಡಿಸಿ ತಕ್ಷಣವೇ ಜಿಲ್ಲಾ ಜಂಟಿ ಆಸ್ಪತ್ರೆಗೆ ಸಾಗಿಸಿದರಾದರೂ, ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.

ಅಪ್ಪ ಇಲ್ಲೇ ಇದ್ದೀನಿ ಎದ್ದೇಳು ಮಗನೇ ಎಂದು ತಂದೆ ಗೋಳಾಡಿದ್ದನ್ನು ಕಂಡು ಸುತ್ತಮುತ್ತ ಇದ್ದ ಜನರ ಕಣ್ಣಾಲಿಗಳು ಒದ್ದೆಯಾಗಿವೆ. ಮುನ್ಸಿಪಲ್‌ ಕಾರ್ಪೋರೇಷನ್‌ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Must Read