June 17, 2026
Wednesday, June 17, 2026
spot_img

ಧರ್ಮಸ್ಥಳ ತಲೆ ಬುರುಡೆ ಕೇಸ್ ನಲ್ಲಿ ಪ್ರಕಾಶ್ ರಾಜ್ ಹೆಸರು:‌ ಮಾಧ್ಯಮಗಳ ಮುಂದೆ ಏನಂದ್ರು ನಟ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತು ಹಾಕಲಾಗಿದೆ ಎಂಬ ಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರೈ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರ ಕೇಸ್‌ಗೂ ನನಗೂ ಏನು ಸಂಬಂಧ? ಇಲ್ಲಿ ನನ್ನ ಹೆಸರನ್ನು ಯಾಕೆ ಲಿಂಕ್‌ ಮಾಡ್ತಿದ್ದೀರಾ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರರಣದ ಪ್ರಮುಖ ವ್ಯಕ್ತಿ ಎಂದು ಗುರುತಿಸಲಾಗಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೂ ಏನು ಸಂಬಂಧ ಇದೆ ಹೇಳ್ತೀನಿ ಕೇಳಿ, ಆತ ಮೊದಲ ಬಾರಿಗೆ ನನ್ನ ಮುಂದೆ ಬಂದು ಎಲ್ಲವನ್ನು ಹೇಳಿದ್ದ. ಆಗ ನಾನು ಇದೇ ಸತ್ಯವನ್ನು ಎಸ್‌ಐಟಿ ಮುಂದೆ ಹೋಗಿ ಹೇಳು, ನೀನು ಹೇಳಿದ್ದು ಸತ್ಯವೇ ಆದರೆ ಇಡೀ ಊರೇ ನಿನ್ನನ್ನು ಕೊಂಡಾಡುತ್ತದೆ. ನಾನು ನಿನ್ನನ್ನು ತಬ್ಬಿಕೊಳ್ತೀನಿ ಎಂದು ಹೇಳಿದ್ದೆ ಅಷ್ಟೆ. ಇದನ್ನು ಬಿಟ್ಟು ನನಗೂ ಚಿನ್ನಯ್ಯನಿಗೂ ಯಾವ ಮಾತುಕತೆಯೂ ಆಗಿಲ್ಲ ಎಂದು ತಮ್ಮ ಎಂದಿನ ಶೈಲಿಯಲ್ಲಿ ಪ್ರಕಾಶ್ ರೈ ಸ್ಪಷ್ಟನೆ ನೀಡಿದ್ದಾರೆ.

ಈ ಮಾತುಕತೆ ನಂತರ ನಾನು ಯಾವ ವಿಷಯಕ್ಕೂ ಬಂದಿಲ್ಲ. ಆದರೆ ಕೆಲ ಮಾಧ್ಯಮಗಳಲ್ಲಿ ನನ್ನನ್ನು ತೇಜೋವಧೆ ಮಾಡಲಾಗಿದೆ. ಹಣ ಪಡೆದು ಡೀಲ್‌ ಮಾಡಿದ್ದೀನಿ ಎಂದೆಲ್ಲ ಹೇಳಲಾಗ್ತಿದೆ. ಧರ್ಮಸ್ಥಳ ತಲೆ ಬುರುಡೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯ, ತನಗೆ ಪ್ರಕಾಶ್ ರಾಜ್ ಕರೆ ಮಾಡಿ ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಕೇಳು ಎಂದು ಹೇಳಿದ್ದರು ಎಂದು ಆರೋಪ ಮಾಡಿದ್ದಾನೆ. ಹೀಗಾಗಿಯೇ, ಈ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡುತ್ತೇನೆ ಎಂದರು.

ಧರ್ಮಸ್ಥಳದಲ್ಲಿ ಸತ್ತಿರುವ ಹೆಣ್ಣುಮಕ್ಕಳ ಬಗ್ಗೆ ನಿಮಗೆ ಕನಿಕರ ಇಲ್ವಾ? ಸೌಜನ್ಯಾ ನಮ್ಮ ರಾಜ್ಯದ ಮಗಳಲ್ವಾ? ಅವಳು ಹೇಗೆ ಸತ್ತಳು, ಯಾಕೆ ಸತ್ತಳು ಅಂತ ಕೇಳಿದ್ರೆ ತಪ್ಪೇನು? ನ್ಯಾಯಕ್ಕಾಗಿ ಪ್ರಶ್ನಿಸಿದ್ದೇನೆ ಹೊರತು ಇಲ್ಲಿ ಯಾವ ಡೀಲ್‌ ಕೂಡ ಮಾಡಿಕೊಂಡಿಲ್ಲ. ಧರ್ಮಸ್ಥಳದಂತಹ ಪರಮ ಪವಿತ್ರ ಜಾಗದ ಬಗ್ಗೆ ನಾನ್ಯಾಕೆ ಅಪಪ್ರಚಾರ ಮಾಡಲಿ? ನನ್ನ ಧರ್ಮವಿರೋಧಿ, ಧರ್ಮಸ್ಥಳದ ವಿರೋಧಿ ಎಂದು ಯಾಕೆ ಬಿಂಬಿಸ್ತೀರಿ ಎಂದು ಅವರು ಇದೇ ಸಂದರ್ಭ ಪ್ರಶ್ನಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !