June 17, 2026
Wednesday, June 17, 2026
spot_img

ಖುದ್ದು ಯಮನೇ ಬಂದು ಎಚ್ಚರಿಕೆ ಕೊಟ್ಟರೂ ಕೇಳಲ್ಲವೇ? ಮಂಗಳೂರು ಪೊಲೀಸರ ಹೊಸ ವಿಡಿಯೊ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವವರು, ಸೀಟ್ ಬೆಲ್ಟ್ ಹಾಕದೇ ಕಾರು ಚಲಾಯಿಸುವವರು, ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸುವವರಿಗೆ ಮಂಗಳೂರು ನಗರ ಪೊಲೀಸರು ಈ ಬಾರಿ ವಿಭಿನ್ನ ರೀತಿಯಲ್ಲಿ ಸಂದೇಶ ನೀಡಿದ್ದಾರೆ!


ಸಾಮಾನ್ಯ ಜಾಗೃತಿ ಕಾರ್ಯಕ್ರಮಗಳ ಬದಲು ಪೌರಾಣಿಕ ಪಾತ್ರಗಳಾದ ಯಮಧರ್ಮ, ಚಿತ್ರಗುಪ್ತರನ್ನು ಬಳಸಿಕೊಂಡು ಸಿದ್ಧಪಡಿಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.


ವಿಡಿಯೊದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಯಮಧರ್ಮ ಪ್ರಶ್ನಿಸುವ ದೃಶ್ಯಗಳ ಮೂಲಕ ರಸ್ತೆ ಸುರಕ್ಷತೆಯ ಮಹತ್ವವನ್ನು ಮನದಟ್ಟು ಮಾಡುವ ಪ್ರಯತ್ನ ಮಾಡಲಾಗಿದೆ. ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್ ಬಳಸದೇ ಇರುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ಅತಿವೇಗದ ಚಾಲನೆ ಮತ್ತು ಸಿಗ್ನಲ್ ಜಂಪ್‌ನಂತಹ ತಪ್ಪುಗಳು ಕೆಲವೇ ಕ್ಷಣಗಳಲ್ಲಿ ಜೀವ ಕಸಿದುಕೊಳ್ಳಬಹುದು ಎಂಬ ಸಂದೇಶವನ್ನು ವಿಡಿಯೊ ನೀಡುತ್ತಿದೆ.


ಜೊತೆಗೆ, ಮಂಗಳೂರು ನಗರದಲ್ಲಿ ಅಳವಡಿಸಲಾಗಿರುವ ಎಐ ಆಧಾರಿತ ಕ್ಯಾಮೆರಾಗಳು ಹಗಲು-ರಾತ್ರಿ ಎನ್ನದೆ ಸಂಚಾರ ಉಲ್ಲಂಘನೆಗಳ ಮೇಲೆ ನಿಗಾ ಇಡುತ್ತಿವೆ. ನಿಯಮ ಉಲ್ಲಂಘಿಸಿದರೆ ಸ್ಥಳದಲ್ಲೇ ಪೊಲೀಸರ ಕೈಗೆ ಸಿಕ್ಕಿಬೀಳದಿದ್ದರೂ ಕ್ಯಾಮೆರಾದ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಕಷ್ಟ ಎಂಬ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ರಸ್ತೆಯಲ್ಲಿ ಒಂದು ಕ್ಷಣದ ನಿರ್ಲಕ್ಷ್ಯ ಜೀವಪರ್ಯಂತ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. ಇದೇ ಕಾರಣಕ್ಕೆ “ದಂಡ ತಪ್ಪಿಸಿಕೊಳ್ಳಲು ಅಲ್ಲ, ಜೀವ ಉಳಿಸಿಕೊಳ್ಳಲು ನಿಯಮ ಪಾಲಿಸಿ” ಎಂಬ ಸಂದೇಶವನ್ನು ಮಂಗಳೂರು ಪೊಲೀಸರು ಜನರಿಗೆ ತಲುಪಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !