ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಶೇಂದಿ ಅಂಗಡಿಗಳಲ್ಲಿ ಆಹಾರ ಪೂರೈಕೆಗೆ ಸಂಬಂಧಿಸಿ ಅಬಕಾರಿ ಇಲಾಖೆ ಹೊಸ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.
ಆಹಾರ ಸುರಕ್ಷತಾ ಪರವಾನಗಿ ಇಲ್ಲದೆ ಇನ್ನು ಮುಂದೆ ಯಾವುದೇ ಶೇಂದಿ ಅಂಗಡಿಯಲ್ಲಿ ಆಹಾರ ವಿತರಣೆ ನಡೆಸಲು ಅವಕಾಶ ಇಲ್ಲ ಎಂದು ಅಬಕಾರಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಪರವಾನಗಿ ಇಲ್ಲದೆ ಆಹಾರ ಪೂರೈಸುವ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಇಂತಹ ಉಲ್ಲಂಘನೆಗಳ ಬಗ್ಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆಯೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಯಾಕೆ ಈ ಕ್ರಮ?
ಕೊಟ್ಟಾಯಂ, ಅಲಪ್ಪುಳ, ಎರ್ನಾಕುಳಂ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಶೇಂದಿ ಅಂಗಡಿಗಳಲ್ಲಿ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ನಡೆಸುತ್ತಿರುವ ‘ಆಪರೇಷನ್ ಶುದ್ಧಿ’ ಅಭಿಯಾನದ ಭಾಗವಾಗಿ ಈ ಹೊಸ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ:
ಶೇಂದಿ ಅಂಗಡಿಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಕುರಿತು ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆಯೂ ಆಹಾರ ಸುರಕ್ಷತಾ ಪರವಾನಗಿ ಕಡ್ಡಾಯಗೊಳಿಸುವ ಕುರಿತು ಸೂಚನೆ ನೀಡಲಾಗಿದ್ದರೂ, ಅದರ ಸಮರ್ಪಕ ಅನುಷ್ಠಾನವಾಗದ ಹಿನ್ನೆಲೆಯಲ್ಲಿ ಇದೀಗ ಮತ್ತೆ ಕಠಿಣ ನಿರ್ದೇಶನಗಳನ್ನು ಹೊರಡಿಸಲಾಗಿದೆ. ಹೊಸ ಆದೇಶದಂತೆ, ಅಗತ್ಯ ಪರವಾನಗಿ ಇಲ್ಲದೆ ಆಹಾರ ಪೂರೈಸುವ ಅಂಗಡಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ರಾಜ್ಯದ ಶೇಂದಿ ಅಂಗಡಿಗಳಲ್ಲಿ ಆಹಾರದ ಸುರಕ್ಷತೆ ಹಾಗೂ ಗುಣಮಟ್ಟವನ್ನು ಖಚಿತಪಡಿಸುವ ಉದ್ದೇಶವನ್ನು ಅಬಕಾರಿ ಇಲಾಖೆ ಹೊಂದಿದೆ.



