October 16, 2026
Friday, October 16, 2026
spot_img

ಜಿ7 ಶೃಂಗಸಭೆಯಲ್ಲಿ ಟ್ರಂಪ್ ಸ್ಫೋಟಕ ಹೇಳಿಕೆ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಬಿಗ್ ಟ್ವಿಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಯ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಇತ್ತೀಚೆಗೆ ಐತಿಹಾಸಿಕ ಒಪ್ಪಂದದ ಚೌಕಟ್ಟು ಸಿದ್ಧವಾಗಿತ್ತು. ಆದರೆ, ಫ್ರಾನ್ಸ್‌ನ ಎವಿಯಾನ್-ಲೆ-ಬೈನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡುವ ಮೂಲಕ ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

“ಲೋಪದೋಷ ಕಂಡರೆ ಬಾಂಬ್‌ಗಳ ಮಳೆ”

ಜಿ7 ನಾಯಕರೊಂದಿಗೆ ಮಾತನಾಡಿದ ಟ್ರಂಪ್, ಪ್ರಸ್ತುತ ಇರಾನ್ ಜೊತೆ ನಡೆದಿರುವ ಮಾತುಕತೆಗಳು ಕೇವಲ ಆರಂಭಿಕ ಹಂತದಲ್ಲಷ್ಟೇ ಇವೆ ಎಂದು ಸ್ಪಷ್ಟಪಡಿಸಿದ್ದಾರೆ. “ಈ ಒಪ್ಪಂದದ ಅಂತಿಮ ಪ್ರತಿ ನನ್ನ ಟೇಬಲ್ ಮೇಲೆ ಬಂದಾಗ ಅದರಲ್ಲಿರುವ ಪ್ರತಿ ನಿಯಮವೂ ನನಗೆ ಸಮ್ಮತವಾಗಿರಬೇಕು. ಒಂದು ವೇಳೆ ಸಣ್ಣ ಲೋಪದೋಷ ಕಂಡುಬಂದರೂ ಅಮೆರಿಕ ಒಪ್ಪಂದದಿಂದ ಹಿಂದೆ ಸರಿಯಲಿದೆ. ಅಷ್ಟೇ ಅಲ್ಲ, ನಾವು ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ ನಡೆಸಲಿದ್ದೇವೆ” ಎಂದು ಟ್ರಂಪ್ ಗುಡುಗಿದ್ದಾರೆ.

ಇಸ್ರೇಲ್ ಅಸಮಾಧಾನ ಮತ್ತು ರಾಜತಾಂತ್ರಿಕ ತಂತ್ರ

ಕೆಲ ದಿನಗಳ ಹಿಂದೆ ಅಮೆರಿಕ-ಇರಾನ್ ಜಂಟಿಯಾಗಿ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಒಪ್ಪಿದ್ದವು. ಇದರಿಂದಾಗಿ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳಿಗೂ ಬ್ರೇಕ್ ಬೀಳಲಿದೆ ಎಂದು ಇರಾನ್ ಹಾಗೂ ಪಾಕಿಸ್ತಾನ ವಾದಿಸಿದ್ದವು. ಇದು ಇಸ್ರೇಲ್‌ನ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ವಿಶ್ಲೇಷಕರ ಪ್ರಕಾರ, ಟ್ರಂಪ್ ಅವರ ಈ ‘ಬಾಂಬ್ ದಾಳಿ’ಯ ಎಚ್ಚರಿಕೆಯು ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೇರುವ ಮತ್ತು ಮಿತ್ರರಾಷ್ಟ್ರ ಇಸ್ರೇಲ್ ಅನ್ನು ಸಮಾಧಾನಪಡಿಸುವ ತಂತ್ರವಾಗಿದೆ. ಈ ಹೇಳಿಕೆಯಿಂದಾಗಿ ಇಡೀ ಶಾಂತಿ ಪ್ರಕ್ರಿಯೆ ಮತ್ತೆ ತೂಗುಯ್ಯಾಲೆಯಲ್ಲಿದೆ.

Must Read