ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಅಭಿಮಾನಿಗಳಿಗೆ BMRCL ಗುಡ್ನ್ಯೂಸ್ವೊಂದನ್ನು ನೀಡಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಅ. 17) ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಜರುಗಲಿರುವ ಹೈ-ವೋಲ್ಟೇಜ್ ಟಿ-20 ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ, ಪ್ರೇಕ್ಷಕರ ಸುಗಮ ಸಂಚಾರಕ್ಕಾಗಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಅವಧಿಯನ್ನು ಮಧ್ಯರಾತ್ರಿಯ ನಂತರವೂ ವಿಸ್ತರಿಸಲಾಗಿದೆ.
ಮೆಜೆಸ್ಟಿಕ್ನಿಂದ ಮುಂಜಾನೆ 1 ಗಂಟೆಗೆ ಕೊನೆಯ ರೈಲು
ಅಕ್ಟೋಬರ್ 17 ರಂದು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ನಗರದ ನಾಲ್ಕೂ ದಿಕ್ಕುಗಳಿಗೆ ಹೊರಡುವ ಕೊನೆಯ ರೈಲುಗಳು ಬೆಳಗ್ಗೆ 1:00 ಗಂಟೆಗೆ ಸರಿಯಾಗಿ ಹೊರಡಲಿವೆ. ಆರ್.ವಿ. ರಸ್ತೆಯಿಂದ ಮುಂಜಾನೆ 1:30 ಕ್ಕೆ ಕೊನೆಯ ರೈಲು ಸಂಚರಿಸಲಿದೆ. ವೈಟ್ಫೀಲ್ಡ್ ಹಾಗೂ ಬೊಮ್ಮಸಂದ್ರ ನಿಲ್ದಾಣಗಳಿಂದ ಮಧ್ಯರಾತ್ರಿ 12:00 ಗಂಟೆಗೆ ಕೊನೆಯ ರೈಲುಗಳು ಹೊರಡಲಿವೆ. ಇನ್ನು ಚಲ್ಲಘಟ್ಟ, ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ಮಾದವಾರ ನಿಲ್ದಾಣಗಳಿಂದ ರಾತ್ರಿ 12:15 ಕ್ಕೆ ಕೊನೆಯ ಮೆಟ್ರೋ ರೈಲು ಪ್ರಯಾಣಿಕರಿಗೆ ಲಭ್ಯವಿರಲಿದೆ.
ಡಿಜಿಟಲ್ ಟಿಕೆಟ್ ಲಭ್ಯ
ಪ್ರೇಕ್ಷಕರ ಅನುಕೂಲಕ್ಕಾಗಿ ಈ ಬಾರಿ ವಿಶೇಷವಾಗಿ ಡಿಜಿಟಲ್ ಪಂದ್ಯದ ಟಿಕೆಟ್ನಲ್ಲೇ ಕ್ಯೂಆರ್ (QR) ಕೋಡ್ ವ್ಯವಸ್ಥೆ ಮಾಡಲಾಗಿದ್ದು, ಎರಡು ಬದಿಯ ಮೆಟ್ರೋ ಪ್ರಯಾಣಕ್ಕೆ ಇದನ್ನು ಬಳಸಬಹುದು. ಟಿಕೆಟ್ ಕೌಂಟರ್ನ ಜನದಟ್ಟಣೆ ತಪ್ಪಿಸಲು ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.
ಸ್ಟೇಡಿಯಂ ಸುತ್ತಮುತ್ತ ನೋ-ಪಾರ್ಕಿಂಗ್
ಕ್ವೀನ್ಸ್ ರಸ್ತೆ (ಬಾಲೇಕ್ಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ), ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದವರೆಗೆ), ಲಿಂಕ್ ರಸ್ತೆ, ಕಬ್ಬನ್ ರಸ್ತೆ (ಸಿಟಿಒ ವೃತ್ತದಿಂದ ಮಣಿಪಾಲ್ ವೃತ್ತದವರೆಗೆ), ಕಾಮರಾಜ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಕಸ್ತೂರಬಾ ರಸ್ತೆ ಹಾಗೂ ಕಬ್ಬನ್ ಪಾರ್ಕ್ ಒಳಗಿನ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗದ ರಸ್ತೆಗಳಲ್ಲಿ ಪಾರ್ಕಿಂಗ್ ಸಂಪೂರ್ಣ ಬಂದ್ ಮಾಡಲಾಗಿದೆ.
ವಾಹನ ನಿಲುಗಡೆಗೆ ನಿಗದಿಪಡಿಸಿದ ಸುರಕ್ಷಿತ ಸ್ಥಳಗಳು
ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ ಮತ್ತು ಯು.ಬಿ. ಸಿಟಿ ಮೊಗಸಾಲೆ.
ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿಯ ಪಾರ್ಕಿಂಗ್ ವಲಯ.
ಫ್ರೀಡಂ ಪಾರ್ಕ್ ಮಲ್ಟಿ ಲೆವೆಲ್ (MLCP) ಕಾರ್ ಪಾರ್ಕಿಂಗ್ ಸ್ಥಳ.
ಸೆಂಟ್ ಜೋಸೆಫ್ (ಯುರೋಪಿಯನ್) ಬಾಲಕರ ಶಾಲೆಯ ಮೈದಾನ (ಮ್ಯೂಸಿಯಂ ರಸ್ತೆ).
ಬಂದೋಬಸ್ತ್ ಸಿಬ್ಬಂದಿಗಳ ವಾಹನಗಳನ್ನು ಕಬ್ಬನ್ ಪಾರ್ಕ್ ಒಳಗಿನ ಟೆನ್ನಿಸ್ ಕ್ಲಬ್ ರಸ್ತೆಯಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ಗೇಟ್ ಸಂಖ್ಯೆಗಳ ಮೂಲಕ ಪ್ರವೇಶ
ಕಬ್ಬನ್ ರಸ್ತೆ ಮಾರ್ಗ: ಗೇಟ್ ಸಂಖ್ಯೆ 1 ರಿಂದ 3 ಮತ್ತು ಇ-18, ಇ-19, ಇ-22 ಹಾಗೂ ಇ-23 ರ ಮೂಲಕ ಕಬ್ಬನ್ ರಸ್ತೆ ಕಡೆಯಿಂದ ಸ್ಟೇಡಿಯಂ ಪ್ರವೇಶಿಸಬಹುದು.
ಲಿಂಕ್ ರಸ್ತೆ ಮಾರ್ಗ: ಗೇಟ್ ಸಂಖ್ಯೆ ಇ-11 ರಿಂದ ಇ-17 ರವರೆಗೆ ಲಿಂಕ್ ರಸ್ತೆಯಲ್ಲಿದ್ದು, ಅನಿಲ್ ಕುಂಬ್ಳೆ ವೃತ್ತದ ಕಡೆಯಿಂದ ಬರುವವರು ಇಲ್ಲಿ ಪ್ರವೇಶ ಪಡೆಯಬಹುದು.
ಕ್ವೀನ್ಸ್ ರಸ್ತೆ ಮಾರ್ಗ: ಗೇಟ್ ಸಂಖ್ಯೆ ಇ-07 ಮತ್ತು ಇ-08 ರಲ್ಲಿ ಒಳಗೆ ಹೋಗಲು ಅವಕಾಶವಿದ್ದು, ಗೇಟ್ ಸಂಖ್ಯೆ ಇ-09 ಮತ್ತು ಇ-9ಎ ಅನ್ನು ಕೇವಲ ಹೊರಗೆ ಹೋಗಲು ಮಾತ್ರ ಬಳಸಬೇಕು. ಗೇಟ್ ಸಂಖ್ಯೆ ಇ-210 ರ ಮೂಲಕ ಆಟಗಾರರು ಹಾಗೂ ಬಿಸಿಸಿಐ (BCCI) ಅಧಿಕಾರಿಗಳಿಗೆ ಮಾತ್ರ ಪ್ರವೇಶವಿರಲಿದೆ.



