ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಬೈಲ್‌ನಲ್ಲಿ ಉಳಿಸಿಕೊಂಡಿದ್ದ ಖಾಸಗಿ ಫೋಟೋ, ವಿಡಿಯೋಗಳನ್ನು ದುರ್ಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಮಹತ್ವದ ಆದೇಶ ಹೊರಡಿಸಿದ್ದು, ಇಂತಹ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಫೋಟೋ, ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್, ಹಣದ ಸುಲಿಗೆ, ಮಾನಸಿಕ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ‘ರಿವೆಂಜ್ ಪೋರ್ನ್’ ಹೆಸರಿನಲ್ಲಿ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಘಟನೆಗಳನ್ನು ಕೂಡಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಒಬ್ಬ ವ್ಯಕ್ತಿ ಖಾಸಗಿ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದಾನೆ ಎಂಬ ಕಾರಣಕ್ಕೆ ಅದನ್ನು ಬೇರೆಡೆ ಹಂಚಿಕೊಳ್ಳಲು ಅಥವಾ ವೈರಲ್ ಮಾಡಲು ಯಾರಿಗೂ ಹಕ್ಕಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ತಕ್ಷಣ ಎಫ್‌ಐಆರ್ ದಾಖಲಿಸಲು ಸೂಚನೆ
ಖಾಸಗಿ ಚಿತ್ರಗಳು, ವಿಡಿಯೋಗಳು, ಬ್ಲ್ಯಾಕ್‌ಮೇಲ್ ಸಂದೇಶಗಳು ಅಥವಾ ಸೆಕ್ಸ್ಟೋರ್ಷನ್ ಪ್ರಕರಣಗಳು ಬೆಳಕಿಗೆ ಬಂದ ಕೂಡಲೇ ಎಫ್‌ಐಆರ್ ದಾಖಲಿಸಬೇಕು ಎಂದು ಆದೇಶಿಸಲಾಗಿದೆ. ಘಟನೆ ಬೇರೆ ಜಿಲ್ಲೆಯಲ್ಲಾಗಿದ್ದರೂ ಅಥವಾ ಬೇರೆ ರಾಜ್ಯಕ್ಕೆ ಸಂಬಂಧಿಸಿದ್ದರೂ ಮೊದಲು ಝೀರೋ ಎಫ್‌ಐಆರ್ ದಾಖಲಿಸಿ ನಂತರ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಯಾವ ಕಾನೂನುಗಳಡಿ ಪ್ರಕರಣ?
ಇಂತಹ ಪ್ರಕರಣಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದ ವಿಧಿಗಳ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(E), 67 ಹಾಗೂ 67(A) ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಹಿಳೆಯರ ಖಾಸಗಿ ಚಿತ್ರಗಳು ಅಥವಾ ವಿಡಿಯೋಗಳು ವೈರಲ್ ಆದರೆ ಇನ್ನಷ್ಟು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕೂಡಾ ತಿಳಿಸಲಾಗಿದೆ.



