September 8, 2026
Tuesday, September 8, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ | ನದಿ ನೀರನ್ನು ತಡೆಯುವುದು ಅನರ್ಥಕ್ಕೆ ಕಾರಣ; ನದಿಯ ಹರಿವು ನಿಲ್ಲಿಸಬಾರದು: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನದಿಗಳು ನಿರಂತರವಾಗಿ ಹರಿಯುವುದರಿಂದಲೇ ಸ್ವಯಂ ಶುದ್ಧೀಕರಣಗೊಳ್ಳುತ್ತವೆ. ನದಿಯ ಹರಿವು ಹಾಗೂ ವೇಗವನ್ನು ತಡೆಯುವುದು ಪ್ರಕೃತಿಯಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಯಾವುದೇ ನದಿಯ ನೈಸರ್ಗಿಕ ಹರಿವಿಗೆ ಅಡ್ಡಿಪಡಿಸುವುದು ಸಲ್ಲದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಮಂಗಳವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಗಂಗಾ ನದಿಯ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಗಳು, ಹರಿದ್ವಾರದ ಬಳಿಕ ಗಂಗೆಯ ಸ್ವರೂಪವೇ ಬದಲಾಗಿದ್ದು, ಮನುಷ್ಯನ ಮಲಮೂತ್ರ ಹಾಗೂ ತ್ಯಾಜ್ಯಗಳನ್ನು ನದಿಗೆ ಸೇರಿಸುವ ಮೂಲಕ ಪವಿತ್ರ ನದಿಯನ್ನು ಅಶುದ್ಧಗೊಳಿಸಲಾಗಿದೆ. ಇದು ದೇಶ, ಪ್ರಕೃತಿ ಹಾಗೂ ಮುಂದಿನ ಪೀಳಿಗೆಗೆ ಮಾಡಿದ ಘೋರ ಅಪಚಾರ ಎಂದು ಹೇಳಿದರು.

ಗಂಗಾ ನದಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ಗಂಗಾಜಲವನ್ನು ಬೆಳ್ಳಿ ಪಾತ್ರೆಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಸರಿಯಾಗಿ ಸಂಗ್ರಹಿಸಿದ ಗಂಗಾಜಲ ದೀರ್ಘಕಾಲವೂ ಕೆಡದೆ ಉಳಿಯುತ್ತದೆ ಎಂಬ ನಂಬಿಕೆ ಇತ್ತು ಎಂದು ಅವರು ವಿವರಿಸಿದರು.

ಗಂಗೆಯ ಕುರಿತಾಗಿ ಅನೇಕ ಆಧುನಿಕ ಸಂಶೋಧನೆಗಳು ನಡೆದಿದ್ದು, ಗಂಗೆಯಲ್ಲಿ ವಿಶೇಷ ಸೂಕ್ಷ್ಮಾಣುಗಳಿವೆ, ಗಂಗಾ ನದಿಯ ನೀರಿಗೆ ಹಾನಿಕಾರಕ ಸೂಕ್ಷ್ಮಾಣುಗಳನ್ನು ನಾಶಪಡಿಸುವ ಶಕ್ತಿಯಿದೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಗಂಗೆ ಸ್ವಯಂ ಶುದ್ಧೀಕರಣ ಗುಣವಿದ್ದು, ತನ್ನನ್ನು ತಾನು ಶುದ್ಧೀ ಕರಿಸಿಕೊಳ್ಳುತ್ತದೆ. ಗಂಗಾ ಜಲವು ದೇಹವನ್ನು ಪ್ರವೇಶಿಸಿದಾಗ ದೇಹದಲ್ಲಿರುವ ಹಾನಿಕಾರಕ ಸೂಕ್ಷ್ಮಾಣುಗಳನ್ನು ನಾಶಪಡಿಸಿ, ಕರುಳಿನಲ್ಲಿರುವ ಒಳ್ಳೆಯ ಸೂಕ್ಷ್ಮಾಣುಗಳನ್ನು ರಕ್ಷಿಸುತ್ತದೆ ಎಂದು ಆಧುನಿಕ ಸಂಶೋಧನೆಗಳು ದೃಢೀಕರಿಸಿದ್ದು, ಆಯುರ್ವೇದದ ಮಾತುಗಳನ್ನು ಇವು ಸಮರ್ಥಿಸುತ್ತದೆ ಎಂದು ಪ್ರತಿಪಾದಿಸಿದರು.

ನದಿ ನೀರನ್ನು ತಡೆಯುವುದು ತಪ್ಪು:

ನದಿಯು ತನ್ನ ಸಹಜ ಹರಿವಿನ ಮೂಲಕವೇ ಶುದ್ಧೀಕರಿಸಿಕೊಳ್ಳುತ್ತದೆ. ನದಿಯ ಹರಿವು ಅಥವಾ ವೇಗವನ್ನು ತಡೆಯುವುದರಿಂದ ಪ್ರಕೃತಿಯಲ್ಲಿ ಅನೇಕ ಅನಾಹುತಗಳು ಉಂಟಾಗಬಹುದು. ಆದ್ದರಿಂದ ನದಿಗಳ ನೈಸರ್ಗಿಕ ಹರಿವನ್ನು ಸಂರಕ್ಷಿಸುವುದು ಅಗತ್ಯ ಎಂದು ರಾಘವೇಶ್ವರ ಶ್ರೀ ಹೇಳಿದರು.

ಶ್ರೀಕಂಠ ಶರ್ಮಾ ಮಡೋಡಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ನಿಡುವಾಜೆ ರಾಮ ಭಟ್ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !