ಹೊಸದಿಗಂತ ಮಡಿಕೇರಿ:
ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮುಗಿಸಿಕೊಂಡು ತಾಯ್ನಾಡಿಗೆ ಹಿಂತಿರುಗುತ್ತಿದ್ದ ಭಕ್ತರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಬೆಂಗಳೂರು ಮೂಲದ ಯುವಕನೊಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವೀರಾಜಪೇಟೆ ಸಮೀಪದ ಪೆರುಂಬಾಡಿ-ಮಾಕುಟ್ಟ ಅಂತರರಾಜ್ಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಬೆಂಗಳೂರಿನ ಎಸ್.ಆರ್. ನಗರದ ನಿವಾಸಿ ರೋಹಿತ್ (29) ಮೃತಪಟ್ಟ ದುರ್ದೈವಿ.
ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಕಾರು
ಬೆಂಗಳೂರಿನ ಆರ್.ಎಸ್. ನಗರದ ನಾಲ್ವರು ಸ್ನೇಹಿತರು ಜೂನ್ 14 ರಂದು ಮಾರುತಿ ಸ್ವಿಫ್ಟ್ ಕಾರಿನಲ್ಲಿ (KA 05 MQ 6289) ಶಬರಿಮಲೆಗೆ ತೆರಳಿದ್ದರು. ಬುಧವಾರ ಕೇರಳದ ಇರಿಟ್ಟಿ-ಮಾಕುಟ್ಟ ಮಾರ್ಗವಾಗಿ ಬೆಂಗಳೂರಿಗೆ ಮರಳುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಕಾರು ವೀರಾಜಪೇಟೆಯಲ್ಲಿ ಕೆಂಪು ಕಲ್ಲು ಇಳಿಸಿ ವಾಪಸಾಗುತ್ತಿದ್ದ ಮಿನಿ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಲಾರಿಯು ಕೂಟುಪೊಳೆ ಮೂಲದ್ದಾಗಿದೆ ಎಂದು ತಿಳಿದುಬಂದಿದೆ.
ಸ್ಥಳದಲ್ಲೇ ಯುವಕನ ಸಾವು, ಮೂವರಿಗೆ ಗಾಯ
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ರೋಹಿತ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್, ಕಾರಿನಲ್ಲಿದ್ದ ಉಳಿದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ವೀರಾಜಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ದೂರು ದಾಖಲು
ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ಶಣ್ಮುಗ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಯ್ಯಪ್ಪನ ದರ್ಶನ ಮುಗಿಸಿ ಸತ್ತ ಯುವಕನ ಕುಟುಂಬದಲ್ಲಿ ಸದ್ಯ ಶೋಕ ಕಡಲು ಆವರಿಸಿದೆ.



