June 20, 2026
Saturday, June 20, 2026
spot_img

ನೀಟ್ ಅಕ್ರಮಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹ*ತ್ಯೆ; ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಕಠಿಣ ಪರಿಶ್ರಮದ ನಡುವೆಯೂ ದೇಶಾದ್ಯಂತ ಸೃಷ್ಟಿಯಾಗಿರುವ ನೀಟ್ ಪರೀಕ್ಷೆಯ ಗೊಂದಲಗಳಿಗೆ 19 ವರ್ಷದ ಯುವತಿ ಅನುಕೀರ್ತನಾ ಬಲಿಯಾಗಿದ್ದಾಳೆ. ಈಗಾಗಲೇ ಎರಡು ಬಾರಿ ನೀಟ್ ಪರೀಕ್ಷೆ ಎದುರಿಸಿದ್ದ ಈಕೆ, ಮೂರನೇ ಬಾರಿಗೆ ಕಠಿಣ ಸಿದ್ಧತೆ ನಡೆಸುತ್ತಿದ್ದಳು. ಆದರೆ ಇತ್ತೀಚಿನ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಸುದ್ದಿಯಿಂದ ಮಾನಸಿಕವಾಗಿ ತೀವ್ರ ಖಿನ್ನತೆಗೆ ಒಳಗಾಗಿ ತನುತ್ಯಾಗ ಮಾಡಿದ್ದಾಳೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ, ಡಿಎಂಕೆ ಪ್ರತಿಭಟನೆ ಭರವಸೆ

ಅನುಕೀರ್ತನಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಮಿಳುನಾಡಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ನೀಟ್ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ತಕ್ಷಣವೇ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದೇ ವೇಳೆ, ಆಡಳಿತಾರೂಢ ಡಿಎಂಕೆ (DMK) ಪಕ್ಷವು ತಮಿಳುನಾಡಿಗೆ ನೀಟ್ ಪರೀಕ್ಷೆಯಿಂದ ಶಾಶ್ವತ ವಿನಾಯಿತಿ ನೀಡಬೇಕೆಂಬ ತನ್ನ ನಿಲುವನ್ನು ಪುನರುಚ್ಚರಿಸಿದೆ. ಈ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಡಿಎಂಕೆ ಘೋಷಿಸಿದೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಪರೀಕ್ಷಾ ಮಂಡಳಿಗಳ ವಿರುದ್ಧ ದೇಶಾದ್ಯಂತ ಆಕ್ರೋಶದ ಅಲೆ ಎದ್ದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !