June 20, 2026
Saturday, June 20, 2026
spot_img

ಕುಟುಂಬದ ಮೇಲಿತ್ತು ಕೊ*ಲೆ ಆರೋಪದ ಕರಿನೆರಳು: ಮನನೊಂದು ನೇಣಿಗೆ ಶರಣಾದ ಆರೋಪಿ ಮಹಿಳೆಯ ತಾಯಿ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ, ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣವು ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಆಘಾತದಿಂದ ಮನನೊಂದಿದ್ದ ತಾಯಿ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.

ಮೃತ ಮಹಿಳೆ ಮಹಾದೇವಿ ಘೋಡಗೇರಿ ಆತ್ಮಹತ್ಯೆ ಮಾಡಿಕೊಂಡ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ತಮ್ಮ ನಿವಾಸದಲ್ಲೇ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಘೋಡಗೇರಿ ಗ್ರಾಮದಲ್ಲೇ ಕೆಲವು ತಿಂಗಳುಗಳ ಹಿಂದೆ ನಡೆದಿದ್ದ ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು. ಸುಮಾರು ₹2 ಕೋಟಿ ವಿಮೆ ಹಣಕ್ಕಾಗಿ ಪತಿ ಸಂದೀಪ್ ಮಂಜರಗಿಯನ್ನು ಪತ್ನಿ ಸುಮಾ ಮಂಜರಗಿ ಸಂಚು ರೂಪಿಸಿ ಕೊಲೆ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಕುಟುಂಬದ ಒಳಜಗಳ, ಹಣದಾಸೆ ಹಾಗೂ ಸಂಬಂಧಗಳ ಸಂಕೀರ್ಣತೆ ಕುರಿತು ರಾಜ್ಯಾದ್ಯಂತ ವ್ಯಾಪಕ ಚರ್ಚೆ ನಡೆದಿತ್ತು.

ಇದನ್ನೂ ಓದಿ:

ಪ್ರಕರಣದ ಪ್ರಮುಖ ಆರೋಪಿ ಸುಮಾ ಮಂಜರಗಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಮಗಳ ಈ ಕೃತ್ಯದಿಂದ ಮಹಾದೇವಿ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಮಗಳು ಕೊಲೆ ಪ್ರಕರಣದಲ್ಲಿ ಸಿಲುಕಿರುವುದು ಮಾತ್ರವಲ್ಲದೆ, ಬಳಿಕ ಬಹಿರಂಗಗೊಂಡ ಕೆಲ ವೈಯಕ್ತಿಕ ಸಂಗತಿಗಳೂ ಅವರಿಗೆ ತೀವ್ರ ನೋವುಂಟುಮಾಡಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಗಳ ವರ್ತನೆ, ಕುಟುಂಬದ ಮೇಲೆ ಬಿದ್ದ ಕಳಂಕ ಹಾಗೂ ಸಮಾಜದಲ್ಲಿ ಎದುರಿಸಬೇಕಾದ ಮಾನಸಿಕ ಒತ್ತಡದಿಂದ ಮಹಾದೇವಿ ಸಾಕಷ್ಟು ಕುಗ್ಗಿಹೋಗಿದ್ದರು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ಮೌನವಾಗಿದ್ದು, ಆತಂಕದಲ್ಲೇ ಕಾಲ ಕಳೆಯುತ್ತಿದ್ದರು ಎನ್ನಲಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬದ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದೇ ಕುಟುಂಬದಲ್ಲಿ ಸಂಭವಿಸಿರುವ ಸರಣಿ ದುರಂತಗಳು ಗ್ರಾಮಸ್ಥರನ್ನು ಕಂಗಾಲಾಗಿಸಿವೆ. ಘಟನಾ ಸ್ಥಳಕ್ಕೆ ಕಾಕತಿ ಹಾಗೂ ಯಮಕನಮರಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !