June 18, 2026
Thursday, June 18, 2026
spot_img

ಜೂನ್ 21ರ ನೀಟ್ ಮರುಪರೀಕ್ಷೆಗೆ ಸಕಲ ಸಿದ್ಧತೆ: ಭದ್ರತೆಗೆ ಜಿಲ್ಲಾಧಿಕಾರಿ ಸೂಚನೆ

ಹೊಸದಿಗಂತ ವರದಿ ಚಿತ್ರದುರ್ಗ:

ಜಿಲ್ಲೆಯ 6 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 21ರಂದು ನಡೆಯಲಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-2026) ಮರುಪರೀಕ್ಷೆಗೆ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸುವಂತೆ ಸೂಚಿಸಿದರು. ಜೂನ್ 21ರಂದು ಮಧ್ಯಾಹ್ನ 2:00ರಿಂದ ಸಂಜೆ 5:15ರವರೆಗೆ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 15 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ

ನೀಟ್ ಮರುಪರೀಕ್ಷೆ ಸೂಕ್ಷ್ಮತೆಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಪರೀಕ್ಷಾ ದಿನದಂದು ಬಿ.ಎನ್.ಎಸ್ ಕಲಂ 163ರಡಿ ನಿಷೇಧಾಜ್ಞೆ ಜಾರಿಗೊಳಿಸುವುದರ ಜೊತೆಗೆ ಆರೋಗ್ಯ ಸಿಬ್ಬಂದಿಯನ್ನೂ ನಿಯೋಜಿಸಲು ಸೂಚನೆ ನೀಡಿದರು.

3,086 ಅಭ್ಯರ್ಥಿಗಳಿಗೆ ಮರುಪರೀಕ್ಷೆ

ನೀಟ್ ಪರೀಕ್ಷೆ ನೋಡಲ್ ಅಧಿಕಾರಿ ನಾಗಭೂಷಣ್ ಮಾತನಾಡಿ, ಚಿತ್ರದುರ್ಗ ಹಾಗೂ ಚಳ್ಳಕೆರೆಯ 6 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3,086 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:

ಬಯೋಮೆಟ್ರಿಕ್ ಪರಿಶೀಲನೆಯ ಬಳಿಕವೇ ಪ್ರವೇಶ

ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗುತ್ತಿದ್ದು, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಪ್ರಿಸ್ಕಿಂಗ್ ನಡೆಸಲಾಗುತ್ತದೆ. ಬಯೋಮೆಟ್ರಿಕ್ ದೃಢೀಕರಣದ ಬಳಿಕವೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಪ್ರಶ್ನೆ ಪತ್ರಿಕೆಗಳಿಗೆ ಪೊಲೀಸ್ ಬೆಂಗಾವಲು

ಪ್ರಶ್ನೆ ಪತ್ರಿಕೆಗಳು ಹಾಗೂ ಓಎಂಆರ್ ಶೀಟ್‌ಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಂಗ್ರಹಿಸಿ, ಪರೀಕ್ಷಾ ದಿನದಂದು ಪೊಲೀಸ್ ಬೆಂಗಾವಲಿನಲ್ಲಿ ಕೇಂದ್ರಗಳಿಗೆ ಸಾಗಿಸಲಾಗುವುದು. ಪರೀಕ್ಷೆ ಬಳಿಕ ಓಎಂಆರ್ ಶೀಟ್‌ಗಳನ್ನು ಅಂಚೆ ಮೂಲಕ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಎಂ.ಬಾಬು, ಡಿಡಿಪಿಐ ಮಂಜುನಾಥ್, ಪೊಲೀಸ್ ಉಪಾಧೀಕ್ಷಕ ಅರುಣ್ ನಾಗೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಾಶಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !