September 26, 2026
Saturday, September 26, 2026
spot_img

ಅಕ್ಕಿ ವ್ಯಾಪಾರದ ಹೆಸರಿನಲ್ಲಿ ಹಣದ ಬೇಡಿಕೆ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸರು

ಹೊಸದಿಗಂತ ವರದಿ ಕಲಬುರಗಿ:

ಅಕ್ಕಿ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡುವುದಾಗಿ ಹೇಳಿ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ.

ದೂರುದಾರರಾದ ಆನಂದ್ ಕುಮಾರ್ (ಯಡ್ರಾಮಿ ತಾಲ್ಲೂಕು) ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.

ದೂರಿನ ಪ್ರಕಾರ, ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ್ ರೆಡ್ಡಿ ಮುದ್ರಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಸಿದ್ದಣ್ಣ ಬಿರಾದರ್ ಅವರು ಅಕ್ಕಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲು ₹50 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇದನ್ನೂ ಓದಿ:

ದೂರುದಾರರು ತಾವು ಬಡವರಾಗಿದ್ದು ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರೂ, ಹಣ ನೀಡಿದರೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದಾಗಿ ಆರೋಪಿಗಳು ಹೇಳಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಂತೆ ಆರೋಪಿಗಳು ನೀಡಿದ ಫೋನ್‌ಪೇ ಸಂಖ್ಯೆಗೆ ದೂರುದಾರರು ₹20 ಸಾವಿರ ಹಣ ವರ್ಗಾವಣೆ ಮಾಡಿದ್ದು, ಉಳಿದ ₹30 ಸಾವಿರವನ್ನು ಶೀಘ್ರದಲ್ಲೇ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಮುರುಗುಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ₹20 ಸಾವಿರ ಹಣ ಸ್ವೀಕರಿಸುವ ವೇಳೆ ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಲೋಕಾಯುಕ್ತದ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ರವಿ ಹಾಗೂ ರಾಜಶೇಖರ್ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಕರಣದ ತನಿಖೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

Must Read