ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ ಚಾಂಪಿಯನ್‌ಶಿಪ್‌ನಲ್ಲಿ ‘ನ್ಯೂಯಾರ್ಕ್ ನಿಕ್ಸ್’ ತಂಡ 53 ವರ್ಷಗಳ ನಂತರ ಐತಿಹಾಸಿಕ ಜಯ ಸಾಧಿಸಿದೆ. ಈ ಮಹಾನ್ ವಿಜಯೋತ್ಸವವನ್ನು ಆಚರಿಸಲು ಲೋವರ್ ಮ್ಯಾನ್‌ಹ್ಯಾಟನ್‌ನ ಬೀದಿಗಳಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಆದರೆ, ಗುರುವಾರ ಮಧ್ಯಾಹ್ನ 3.40 ರ ಸುಮಾರಿಗೆ ಪೊಲೀಸ್ ವಾಹನದ ಬಳಿಯೇ ಶಂಕಿತನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಶಂಕಿತನನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕೇ ದಿನದಲ್ಲಿ ಎರಡು ಬಾರಿ ಘಟನೆ: ನಿವಾಸಿಗಳಲ್ಲಿ ಹೆಚ್ಚಿದ ಭೀತಿ
ಆಘಾತಕಾರಿ ವಿಷಯವೆಂದರೆ, ಇದಕ್ಕೂ ಮುನ್ನ ಜೂನ್ 16 ರ ಶನಿವಾರ ರಾತ್ರಿ ಕೂಡ ಟೈಮ್ಸ್ ಸ್ಕ್ವೇರ್‌ನ 42ನೇ ಬೀದಿ ಮತ್ತು ಬ್ರಾಡ್‌ವೇ ಜಂಕ್ಷನ್ ಬಳಿ ಕನಿಷ್ಠ ಏಳು ಸುತ್ತು ಗುಂಡು ಹಾರಿಸಲಾಗಿತ್ತು. ಅಂದಿನ ದಾಳಿಯಲ್ಲಿ 17 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದ. ಕೇವಲ ನಾಲ್ಕು ದಿನಗಳ ಅಂತರದಲ್ಲಿ ವಿಶ್ವದ ಅತ್ಯಂತ ಜನನಿಬಿಡ ಪ್ರವಾಸಿ ತಾಣವಾದ ಟೈಮ್ಸ್ ಸ್ಕ್ವೇರ್‌ನಲ್ಲಿ ಎರಡು ಬಾರಿ ಶೂಟೌಟ್ ನಡೆದಿರುವುದು ನ್ಯೂಯಾರ್ಕ್ ನಿವಾಸಿಗಳು ಮತ್ತು ಪ್ರವಾಸಿಗರಲ್ಲಿ ಭದ್ರತೆಯ ಆತಂಕವನ್ನು ತೀವ್ರಗೊಳಿಸಿದೆ.
ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ
ಸದ್ಯ ವಿಜಯೋತ್ಸವದ ಮೆರವಣಿಗೆ ಮತ್ತು ನಗರದ ಸುರಕ್ಷತೆಗಾಗಿ ಸುಮಾರು 10,000 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇಡೀ ನಗರದಲ್ಲಿ ಹದ್ದಿನ ಕಣ್ಣು ಇಡಲಾಗಿದ್ದು, ತನಿಖೆ ಚುರುಕುಗೊಂಡಿದೆ.



