ಹೊಸದಿಗಂತ ವರದಿ ಬೀದರ್:
ಆಗಸ್ಟ್ 17ರಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಅಲ್ಲಿಯ ಎಂ.ಜಿ ರಸ್ತೆಯಲ್ಲಿರುವ ಸುರಸದನದಲ್ಲಿ ವಿಶ್ವಭೂಷಣ ರಾಜೆ ಶಿವಛತ್ರಪತಿ ಚೇತನ ಯಾತ್ರೆ ಹಾಗೂ ವಿಶ್ವಗುರು ಬಸವ ದರುಶನ ಸಮಾವೇಶ ಜರುಗಲಿದೆ ಎಂದು ಕಾರ್ಯಕ್ರಮದ ಪ್ರಮುಖ ಸಂಘಟಕರು ಹಾಗೂ ವಿಶ್ವಭೂಷಣರಾಜೆ ಶಿವಛತ್ರಪತಿ ವಿಶೇಷ ಪರಿಷತ್‌ನ ಮುಖ್ಯ ವಕ್ತಾರರಾದ ಜನಾರ್ಧನ ಪಾಟೀಲ ತಿಳಿಸಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ತಾನು ಈಗಾಗಲೇ 7 ರಾಜ್ಯಗಳನ್ನು ಸಂಚರಿಸಿ ಛತ್ರಪತಿ ಶಿವಾಜಿ ಮಹಾರಾಜರ ಪ್ರಚಾರ ಹಾಗೂ ಪ್ರಸಾರ ಕಾರ್ಯ ಕೈಗೊಳ್ಳಲಾಗಿದೆ. ಜುಲೈ ಅಂತ್ಯದ ವರೆಗೆ ಇನ್ನು ಅನೇಕ ರಾಜ್ಯಗಳನ್ನು ಸಂಚರಿಸಿ ಅಲ್ಲಿ ಅಲ್ಲಿ ಶಿವಾಜಿ ಮಹಾರಾಜರ ತ್ಯಾಗಮಯ ವಿಚಾರಗಳನ್ನು ಪರಿಚಯಿಸಲಾಗುತ್ತದೆ. ವಿಶೇಷವಾಗಿ ಅವರು ಸ್ಥಾಪಿಸಿದ ಹಿಂದವಿ ಸ್ವರಾಜ್ಯ ಸ್ಥಾಪನಾ ವಿಷಯವನ್ನು ಯುವ ಸಮೂಹಕ್ಕೆ ಪರಿಚಯಿಸಿ ಅವರಲ್ಲಿ ದೇಶಪ್ರೇಮ ಹಾಗೂ ಮಹಾತ್ಮರ ಬಗ್ಗೆ ಗೌರವ ಹೆಚ್ಚಿಸುವ ಮೂಲ ಉದ್ದೇಶ ಹೊಂದಿದ್ದೇವೆ ಎಂದರು.
ಇದು ಸಂಪೂರ್ಣ ರಾಜಕೀಯ ರಹಿತ ಕಾರ್ಯಕ್ರಮ ಆಗಿರುತ್ತದೆ. ಕೇವಲ ದೇಶದ ಬುದ್ದಿಜೀವಿಗಳಿಗೆ ಇಲ್ಲಿ ಆಹ್ವಾನ ಇರುತ್ತದೆ. ಜಾತಿ, ಮತ, ಪಂಥ, ಪಂಗಡ ಎಂಬ ಭೇದ ಭಾವ ಇರದೆ ಎಲ್ಲ ಜನಾಂಗದವರಿಗೆ ಇಲ್ಲಿ ಮುಕ್ತ ಅವಕಾಶ ಇರುತ್ತದೆ ಎಂದರು.
ಇದನ್ನೂ ಓದಿ:
ಛತ್ರಪತಿ ಶಿವಾಜಿ ಮಹಾರಾಜರ ವಾಸಸ್ತಾನವಾದ ಶಿವನೇರಿ (ಈಗಿನ ಪುಣೆ), ಶಾಹು ಪ್ಯಾಲೇಸ್ ಕೊಲ್ಲಾಪುರ, ವಿಜಯಪುರದ ಕಾಗಲ ಹಾಗೂ ಬೀದರ್ ನಗರದ ಮರಾಠಾ ಭವನದ ನಂಟು ಬೆಸೆಯುವ ಕಾರ್ಯಕ್ರಮ ಇದಾಗಲಿದ್ದು, ಈ ಐತಿಹಾಸಿಕ ಹಾಗೂ ಅರ್ಥಗರ್ಭಿತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಜನಾರ್ಧನ ಪಾಟೀಲ ಕರೆ ಕೊಟ್ಟರು.
ವಿಧಾನ ಪರಿಷತ್ ಸದಸ್ಯರಾದ ಎಂ.ಜಿ ಮುಳೆ, ಮರಾಠಾ ಸಮಾಜದ ಪ್ರಮುಖರಾದ ವೆಂಕಟಮೆಯಿಂದೆ, ಲಿಂಗಾಯತ ಸಮಾಜದ ಮುಖಂಡರಾದ ಚಂದ್ರಶೇಖರ ಹೆಬ್ಬಾಳೆ ಮಾತನಾಡಿದರು. ಜೈರಾಜ ಖಂಡ್ರೆ, ಕಂಟೆಪ್ಪ ಗಂದಿಗುಡೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
ಬಸವ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ: ಮುಳೆ
ಆಗಸ್ಟ್ 17, 2026ರಂದು ಆಗ್ರಾದಲ್ಲಿ ಶಿವಛತ್ರಪತಿ ಚೇತನಾ ಯಾತ್ರೆ ಜೊತೆಗೆ ವಿಶ್ವಗುರು ಬಸವಣ್ಣನವರ ದರ್ಶನ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಜಿ ಮುಳೆ ತಿಳಿಸಿದರು.
ಈ ಹಿಂದೆ ಬಿಹಾರದ ಪಾಟ್ನಾ ಹಾಗೂ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ವಿಶ್ವಗುರು ಬಸವಣ್ಣನವರ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರವಿಂದ ಜತ್ತಿ ಈ ಉಭಯ ಕಾರ್ಯಕ್ರಮ ಆಯೋಜಿಸಲು ಸಾಥ ನೀಡಿದ್ದರು. ವಿಶ್ವಗುರು ಬಸವಣ್ಣನವರು ಸಮಾನತೆಗಾಗಿ ಹೋರಾಡಿದರೆ, ಶಿವಾಜಿ ಮಹಾರಾಜರು ರಾಷ್ಟ್ರೀಯ ಐಕ್ಯತೆ ಹಾಗೂ ಸ್ವಾಭಿಮಾನ ಕಿಚ್ಚು ಹೆಚ್ಚಿಸಲು ಮುಂದಾಗಿದ್ದರು. ಹಾಗಾಗಿ ಈ ಇಬ್ಬರು ಮಹಾತ್ಮರ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.
17 ಆಗಸ್ಟ್ 1766ರಲ್ಲಿ ಔರಂಗಜೇಬನಿಂದ ಬಂಧಿಸಲ್ಪಟ್ಟಿದ್ದ ಶಿವಾಜಿ ಮಹಾರಾಜರು 100 ದಿನಗಳ ನಂತರ ಬಿಡುಗಡೆಯಾದ ದಿನವಾಗಿರುವುದರಿಂದ ಈ ಕಾರ್ಯಕ್ರಮ ವಿಶೇಷ ಮಹತ್ವ ಪಡೆದಿದೆ. ಶಿವಾಜಿ ಮಹಾರಾಜರ ನಂತರ ಅವರ ಪುತ್ರ ಸಾಂಬಾಜಿ ಮಹಾರಾಜ, ನಂತರ ರಾಜಾರಾಮ ಅವರು ಹಿಂದವಿ ಸ್ವರಾಜ್ಯ ಉಳಿಸಲು ಶ್ರಮಿಸಿದರು ಎಂದರು.



