ಹೊಸದಿಗಂತ ವರದಿ ಬೆಳಗಾವಿ:
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರನ್ನು ಶೀಘ್ರದಲ್ಲೇ ಗುರುತಿಸಿ, ಅವರ ರಾಜಕೀಯ ಭವಿಷ್ಯಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದರು.
ಭಾನುವಾರ ನಗರದಲ್ಲಿ ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರದ ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ಶಾಸಕರನ್ನು ಹೆದರಿಸಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಿದರು. ನೈತಿಕತೆಯ ಬಗ್ಗೆ ಬಿಜೆಪಿಯನ್ನು ಪ್ರಶ್ನಿಸುವ ಕಾಂಗ್ರೆಸ್ ಮೊದಲು ತನ್ನ ನಡೆ-ನುಡಿಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಅಡ್ಡ ಮತದಾನದ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಲ್ಲಿಸಲು ಈಗಾಗಲೇ ಭೇಟಿಗೆ ಸಮಯ ಕೋರಲಾಗಿದೆ. ಸಮಯ ದೊರೆತ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ದೆಹಲಿಗೆ ತೆರಳಿ ಸಮಗ್ರ ವರದಿ ನೀಡಲಾಗುವುದು. ಅಡ್ಡ ಮತದಾನ ಮಾಡಿದ ಶಾಸಕರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ‘ಕರ್ನಾಟಕದ ಚಾಣಕ್ಯ’ ಎಂದು ಬಿಂಬಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್, “ಡಿ.ಕೆ. ಶಿವಕುಮಾರ್ ಯಾವ ಚಾಣಕ್ಯನೂ ಅಲ್ಲ. ಕುದುರೆ ವ್ಯಾಪಾರ ಮಾಡುವವರು ಚಾಣಕ್ಯರಾಗಲು ಸಾಧ್ಯವಿಲ್ಲ. ಕಳೆದ ಬಾರಿ ಅವರು ಸಚಿವರಾಗಿದ್ದಾಗಲೇ 17 ಶಾಸಕರು ರಾಜೀನಾಮೆ ನೀಡಿದ್ದರು. ಆಗ ಅವರ ಚಾಣಕ್ಯ ನೀತಿ ಎಲ್ಲಿತ್ತು?” ಎಂದು ಪ್ರಶ್ನಿಸಿದರು.



