June 22, 2026
Monday, June 22, 2026
spot_img

ವಿಧಾನಪರಿಷತ್ ಚುನಾವಣೆಯಲ್ಲಿ ಕ್ರಾಸಿಂಗ್ ವೋಟಿಂಗ್: ಬಿಜೆಪಿಗೆ ತೀವ್ರ ಮುಜುಗರ ತಂದಿದೆ ಎಂದ ಡಿ.ವಿ. ಸದಾನಂದಗೌಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ವಿಧಾನಪರಿಷತ್ ಚುನಾವಣೆಯ ಅಡ್ಡ ಮತದಾನದ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಈ ಅಡ್ಡ ಮತದಾನವು ಪಕ್ಷಕ್ಕೆ ಭಾರಿ ಮುಜುಗರ ತಂದಿಟ್ಟಿದ್ದು, ಇದರ ಹಿಂದೆ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ನಡೆದ ಗುಪ್ತ ಸಭೆಯ ಪಿತೂರಿ ಅಡಗಿದೆ ಎಂದು ಅವರು ಸ್ಫೋಟಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಮೊದಲೇ ಎಚ್ಚರಿಸಿದ್ದರೂ ನಿರ್ಲಕ್ಷ್ಯ ವಹಿಸಿದರು!

ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡರು, ಬೆಂಗಳೂರಿನ ಹೆಬ್ಬಾಳದ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ನಮ್ಮ ಪಕ್ಷದ ಶಾಸಕರು ರಹಸ್ಯ ಸಭೆ ನಡೆಸುತ್ತಿರುವ ಬಗ್ಗೆ ನನಗೆ ಮೊದಲೇ ಖಚಿತ ಮಾಹಿತಿ ಸಿಕ್ಕಿತ್ತು. ಈ ಆತಂಕಕಾರಿ ಬೆಳವಣಿಗೆಯ ಸುಳಿವನ್ನು ನಾನು ತಕ್ಷಣವೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಪ್ರಮುಖ ನಾಯಕರಿಗೆ ತಲುಪಿಸಿ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೆ. ಆದರೆ ನಮ್ಮ ನಾಯಕರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ಮಾಡಿದ್ದೇ ಇಂದು ಪಕ್ಷಕ್ಕೆ ಈ ರೀತಿಯ ಮುಜುಗರ ತರಲು ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಆಂತರಿಕ ಕಚ್ಚಾಟ ಹಾಗೂ ‘ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್’ಗೆ ಆಕ್ರೋಶ:

ಪಕ್ಷದೊಳಗಿನ ಆಂತರಿಕ ಕಚ್ಚಾಟ ಮತ್ತು ಸ್ವಹಿತಾಸಕ್ತಿಯ ‘ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್’ನಿಂದಾಗಿ ಬಿಜೆಪಿ ಇಂದು ಇಂತಹ ಹೀನಾಯ ಸ್ಥಿತಿಗೆ ಬಂದು ತಲುಪಿದೆ ಎಂದು ಅವರು ಮಾರ್ಮಿಕವಾಗಿ ನುಡಿದ್ದಾರೆ.  

ವಿಧಾನಸಭೆ ಚುನಾವಣೆ, ಇಬ್ಬರು ಮಾಜಿ ಸಿಎಂಗಳ ಪುತ್ರರ ಸೋಲು ಹಾಗೂ ದಾವಣಗೆರೆ ಲೋಕಸಭೆ ಚುನಾವಣೆಯ ಹಿನ್ನೆಡೆಗಳ ನಂತರವೂ ಪಕ್ಷದಲ್ಲಿ ಯಾವುದೇ ಗಂಭೀರ ವಿಮರ್ಶೆ ಮತ್ತು ಆತ್ಮಾವಲೋಕನ ನಡೆಯಲಿಲ್ಲ. ಇಂತಹ ತಪ್ಪುಗಳ ಸರಣಿಯೇ ಇಂದಿನ ಶಾಸಕರ ಬಂಡಾಯಕ್ಕೆ ದಾರಿಯಾಗಿದೆ ಎಂದು ಎಚ್ಚರಿಸಿದರು.  

ಇದನ್ನೂ ಓದಿ:

ಅಡ್ಡ ಮತದಾನ ಮಾಡಿದವರನ್ನು ಪತ್ತೆಹಚ್ಚಲು ಶಾಸಕರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಆಣೆ-ಪ್ರಮಾಣ ಮಾಡಿಸಲು ಚಿಂತನೆ ನಡೆಸಿರುವ ಬಿ.ವೈ. ವಿಜಯೇಂದ್ರ ಅವರ ತೀರ್ಮಾನಕ್ಕೆ ಸದಾನಂದಗೌಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ನಮ್ಮ ಕೊಳಕು ರಾಜಕೀಯವನ್ನು ಧರ್ಮಸ್ಥಳದ ಪುಣ್ಯ ಮೆಟ್ಟಿಲುಗಳ ಮೇಲೆ ಇಡುವುದು ಸರಿಯಲ್ಲ ಎಂದು ನಾನು ವಿಜಯೇಂದ್ರ ಹಾಗೂ ಅಶೋಕ್ ಅವರಿಗೆ ಫೋನ್ ಮಾಡಿ ತಿಳಿಸಿದ್ದೇನೆ” ಎಂದರು.

ಈ ನಡುವೆ, ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ಶಾಸಕರಿಂದ 11ಕ್ಕೂ ಹೆಚ್ಚು ಅಡ್ಡ ಮತಗಳು ಚಲಾವಣೆಯಾಗಿರುವುದು ಬಿಜೆಪಿ-ಜೆಡಿಎಸ್ ಹೈಕಮಾಂಡ್ ಅನ್ನು ತೀವ್ರವಾಗಿ ಕೆರಳಿಸಿದೆ. ಈ ಗೊಂದಲ ಬಗೆಹರಿಸಲು ಮತ್ತು ತಪ್ಪಿತಸ್ಥ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲು ರಾಜ್ಯ ನಾಯಕರಾದ ವಿಜಯೇಂದ್ರ ಹಾಗೂ ಆರ್. ಅಶೋಕ್‌ರನ್ನು ಹೈಕಮಾಂಡ್ ಜೂನ್ 23 ರಂದು ದೆಹಲಿಗೆ ಬುಲಾವ್ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !