ಹೊಸದಿಗಂತ ವರದಿ ಮಡಿಕೇರಿ:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನಗಿರುವ ಒಂದು ರಾಜ್ಯವನ್ನೂ ಕಳೆದುಕೊಳ್ಳುವ ಆತಂಕದಲ್ಲಿದ್ದು, ಅದಕ್ಕಾಗಿಯೇ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಟೀಕಿಸಿದ್ದಾರೆ.
ಮಡಿಕೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್’ಗೆ ಉಸಿರಾಡುವುದಕ್ಕೆ ದೇಶದಲ್ಲಿ ಇರುವುದು ಇದೊಂದೇ ರಾಜ್ಯ. 2028 ರ ಚುನಾವಣೆಯಲ್ಲಿ ಅದು ಕೂಡಾ ಇಲ್ಲದಂತೆ ಆಗುವ ಆತಂಕ ಅವರಿಗಿದೆ. ಆ ಮಾಹಿತಿ ಅವರಿಗೆ ಈಗಾಗಲೇ ಗೊತ್ತಾಗಿದೆ. ಆದ್ದರಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ‘ಬಿಜೆಪಿ ಹಿಂದೂ ರಾಷ್ಟ್ರ ಮಾಡುವ ಉದ್ದೇಶ ಹೊಂದಿದೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರ ಈ ಹೇಳಿಕೆ ಅನಿರೀಕ್ಷಿತವಲ್ಲ. ಹಿಂದಿನಿಂದಲೂ ಅವರ ಮನೋಭಾವವೇ ಹಾಗಿದೆ. ಕಾಂಗ್ರೆಸ್’ನ ನಡವಳಿಕೆಯೇ ಯಾವಾಗಲೂ ಅಪಪ್ರಚಾರ ಮಾಡುವುದು ಎನ್ನುವುದು ನಮಗೂ ಗೊತ್ತಿದೆ. ಆದರೆ ಭಾರತೀಯ ಜನತಾ ಪಕ್ಷ ಸುರಕ್ಷಿತ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕೆಲಸ ಮಾಡುತ್ತಿದೆ ಎಂದು ಯದುವೀರ್ ನುಡಿದರು.
ಪ್ರಧಾನಿ ಮೋದಿಯವರನ್ನು ದೇಶದ ಜನ ಒಪ್ಪಿದ್ದಾರೆ. ಹೀಗಾಗಿಯೇ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ನಮ್ಮ ಪಕ್ಷ ಎಲ್ಲಾ ಜನಾಂಗಗಳನ್ನು ಒಳಗೊಂಡು ಕೆಲಸ ಮಾಡುತ್ತಿದೆ. ಇಂದು ಹೆದ್ದಾರಿ, ರೈಲ್ವೇ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ. ಇದನ್ನೆಲ್ಲ ಕೇವಲ ಹಿಂದುಗಳು ಮಾತ್ರವೇ ಬಳಕೆ ಮಾಡುತ್ತಾರೆಯೇ.? ಇವುಗಳಲ್ಲಿ ಹಿಂದೂಗಳು ಮಾತ್ರ ಓಡಾಡುತ್ತಾರೆಯೇ ಎಂದು ಪ್ರಶ್ನಿಸಿದ ಯದುವೀರ್, ಇವುಗಳಲ್ಲಿ ಎಲ್ಲಾ ಧರ್ಮಗಳ ಜನರು ಓಡಾಡುತ್ತಾರೆ. ಆದರೆ ಕಾಂಗ್ರೆಸ್ ಮಾತ್ರ ಕೇವಲ ಅಪಪ್ರಚಾರ ಮಾಡುತ್ತದೆ ಅಷ್ಟೇ ಎಂದಿದ್ದಾರೆ.
ನೀವೇ ನಿರ್ಧರಿಸಿ:
ಬಿಡದಿ ಟೌನ್ ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಯದುವೀರ್ ಅವರು, ಈ ಯೋಜನೆ ಆರಂಭವಾಗಿದ್ದೇ ಎಚ್ ಡಿಕೆ ಕಾಲದಲ್ಲಿ ಎಂದು ಸಿಎಂ ಡಿಕೆಶಿ ಹೇಳುತ್ತಿದ್ದಾರೆ. ಆದರೆ ಬಿಡದಿ ಟೌನ್ ಶಿಪ್ ನಿರ್ಮಾಣ ಕೆಲಸ ಯಾರ ಸಮಯದಲ್ಲಿ ಆಯಿತು ಎನ್ನುವುದು ಮುಖ್ಯವಲ್ಲ. ಈಗ ನಿಮ್ಮ ಸರ್ಕಾರವಿದೆ.
ಜನರ ಅಭಿಪ್ರಾಯ ವ್ಯಕ್ತವಾಗುತ್ತಿರುವ ಹಾಗೆ ನೀವು ನಿರ್ಧಾರ ಮಾಡಿ. ಹಿಂದೆ ಇದ್ದವರು, ಮುಂದೆ ಬರುವವರ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಸರ್ಕಾರ, ಆಡಳಿತ ನಿಮ್ಮದೇ ಇದೆ. ಇಂದು ಜನರ ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ, ಆ ಅಭಿಪ್ರಾಯದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವವರಿಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯದುವೀರ್ ಪಕ್ಷ ಶಿಸ್ತುಕ್ರಮ ಕೈಗೊಳ್ಳುತ್ತದೆ. ಅದರ ವರದಿಗಾಗಿ ಈಗಾಗಲೇ ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಸಿ ಟಿ ರವಿ ಅವರ ನೇತೃತ್ವದಲ್ಲಿ ಸಮಿತಿ ತನಿಖೆ ಮಾಡುತ್ತಿದೆ.
ಇದನ್ನೂ ಓದಿ:
ಅಡ್ಡಮತದಾನ ನಡೆದಿರುವುದು ಇದೇನು ಮೊದಲಲ್ಲ. ಬೇರೆ ಪಕ್ಷಗಳಲ್ಲೂ ಅಡ್ಡಮತದಾನ ನಡೆದಿವೆ. ಈಗ ನಮ್ಮ ಪಕ್ಷದಲ್ಲೂ ನಡೆದಿದೆ. ನಾವು ಕ್ರಮ ತೆಗೆದುಕೊಳ್ಳಬೇಕಾಗಿದೆ. ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಆಣೆ ಪ್ರಮಾಣಕ್ಕೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಅದು ಪಕ್ಷದ ಆಂತರಿಕ ವಿಚಾರವಾಗಿದ್ದು, ಏನು ಮಾಡಬೇಕು ಮಾಡಬಾರದು ಅಂತ ಪಕ್ಷ ನಿರ್ಧಾರ ಮಾಡುತ್ತದೆ. ಅದನ್ನೆಲ್ಲ ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.



