June 25, 2026
Thursday, June 25, 2026
spot_img

ಬಾಯಿ ಮುಚ್ಚಿದ್ದಕ್ಕೆ ದುಬಾರಿ ಬೆಲೆ ತೆತ್ತ ಆಟಗಾರ: ಫಿಫಾ ವಿಶ್ವಕಪ್‌ನಲ್ಲಿ ಹೊರಬಂತು ಮೊದಲ ರೆಡ್ ಕಾರ್ಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್ ಫುಟ್ಬಾಲ್‌ನಲ್ಲಿ ಹೊಸದಾಗಿ ಜಾರಿಯಾದ ನಿಯಮವೊಂದು ಈಗಾಗಲೇ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಂದ್ಯದ ವೇಳೆ ಬಾಯಿ ಮುಚ್ಚಿಕೊಂಡು ಎದುರಾಳಿ ಆಟಗಾರರೊಂದಿಗೆ ವಾಗ್ವಾದ ನಡೆಸಿದ ಕಾರಣ ಪರಾಗ್ವೆಯ ಮಿಚೆಲ್ ಅಲ್ಮಿರೋನ್ ಅವರಿಗೆ ರೆಡ್ ಕಾರ್ಡ್ ತೋರಿಸಲಾಗಿದೆ.

ಪಂದ್ಯದಲ್ಲಿ ಏನಾಯಿತು?

ಟರ್ಕಿ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಮೊದಲಾರ್ಧದ ಹೆಚ್ಚುವರಿ ವೇಳೆಯಲ್ಲಿ ಅಲ್ಮಿರೋನ್ ಎದುರಾಳಿ ಆಟಗಾರನೊಂದಿಗೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಕೈಯಿಂದ ಬಾಯಿ ಮುಚ್ಚಿಕೊಂಡು ಮಾತನಾಡಿರುವುದನ್ನು ರೆಫರಿ ಗಮನಿಸಿ, VAR ಪರಿಶೀಲನೆಯ ಬಳಿಕ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಿದರು.

ಹೊಸ ನಿಯಮದ ಹಿನ್ನೆಲೆ

ಮೈದಾನದಲ್ಲಿ ಜನಾಂಗೀಯ ನಿಂದನೆ ಅಥವಾ ಅಸಭ್ಯ ಪದಗಳ ಬಳಕೆಯನ್ನು ತಡೆಯಲು ಅಂತಾರಾಷ್ಟ್ರೀಯ ಫುಟ್ಬಾಲ್ ಮಂಡಳಿ ಈ ಕಠಿಣ ನಿಯಮ ಜಾರಿಗೆ ತಂದಿದೆ. ಕ್ಯಾಮೆರಾ ಮತ್ತು ಲಿಪ್-ರೀಡಿಂಗ್‌ನಿಂದ ತಪ್ಪಿಸಿಕೊಳ್ಳಲು ಆಟಗಾರರು ಬಾಯಿ ಮುಚ್ಚಿಕೊಳ್ಳುವ ಪ್ರವೃತ್ತಿಗೆ ಬ್ರೇಕ್ ಹಾಕುವುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ:

ಯಾವ ಸಂದರ್ಭಗಳಲ್ಲಿ ನಿಷೇಧ?

ಎದುರಾಳಿ ಆಟಗಾರರು ಅಥವಾ ರೆಫರಿಯೊಂದಿಗೆ ವಾದಿಸುವಾಗ ಕೈ, ತೋಳು ಅಥವಾ ಜೆರ್ಸಿಯಿಂದ ಬಾಯಿ ಮುಚ್ಚಿಕೊಳ್ಳುವುದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಆದರೆ ತಂಡದ ತಂತ್ರಗಾರಿಕೆ ಕುರಿತು ಸಹ ಆಟಗಾರರೊಂದಿಗೆ ಮಾತನಾಡುವಾಗ ಇದಕ್ಕೆ ವಿನಾಯಿತಿ ಇದೆ.

ಇತಿಹಾಸದಲ್ಲಿ ಮೊದಲ ಘಟನೆ

ಹೊಸ ನಿಯಮ ಜಾರಿಯಾದ ಬಳಿಕ ಬಾಯಿ ಮುಚ್ಚಿಕೊಂಡ ಕಾರಣ ರೆಡ್ ಕಾರ್ಡ್ ಪಡೆದ ಮೊದಲ ಆಟಗಾರ ಎಂಬ ದಾಖಲೆಗೆ ಮಿಚೆಲ್ ಅಲ್ಮಿರೋನ್ ಪಾತ್ರರಾಗಿದ್ದಾರೆ. ಈ ಘಟನೆ ಬಳಿಕ ಫುಟ್ಬಾಲ್ ವಲಯದಲ್ಲಿ ಫಿಫಾ ಹೊಸ ನಿಯಮದ ಕುರಿತು ವ್ಯಾಪಕ ಚರ್ಚೆ ಆರಂಭವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !