October 16, 2026
Friday, October 16, 2026
spot_img

SSLC-PUC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ: ಶಿಕ್ಷಣ ಇಲಾಖೆಯ ಸೂಚನೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಕ್ರಮದಲ್ಲಿ ಶಿಕ್ಷಣ ಇಲಾಖೆಯು ಮಹತ್ವದ ಮಾರ್ಪಾಡು ಮಾಡಿದೆ. ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿದ್ದ ಮೂರು ವಾರ್ಷಿಕ ಪರೀಕ್ಷೆಗಳ ನಿಯಮವನ್ನು ಕೈಬಿಡಲಾಗಿದ್ದು, ಪ್ರಸ್ತುತ ಸಾಲಿನಿಂದ ಕೇವಲ ಎರಡು ಪರೀಕ್ಷೆಗಳನ್ನು ಮಾತ್ರ ನಡೆಸಲು ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಕಳೆದ ಬಾರಿಯ ರಿಸಲ್ಟ್ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಗಂಭೀರವಾಗಿ ಓದಿನ ಕಡೆ ಗಮನ ಹರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬದಲಾವಣೆಗೆ ಕಾರಣವೇನು?

ಈ ಹಿಂದೆ ತರಲಾಗಿದ್ದ ಮೂರು ಪರೀಕ್ಷೆಗಳ ನಿಯಮದಿಂದಾಗಿ ಇಲಾಖೆಯ ಸಿಬ್ಬಂದಿ ವರ್ಷದಲ್ಲಿ ಸುಮಾರು 7 ತಿಂಗಳ ಕಾಲ ಕೇವಲ ಪರೀಕ್ಷೆ, ಮೌಲ್ಯಮಾಪನ ಹಾಗೂ ಅಂಕಪಟ್ಟಿ ವಿತರಣೆಯ ಕೆಲಸಗಳಲ್ಲೇ ಮುಳುಗಬೇಕಾಗುತ್ತಿತ್ತು. ಇದು ಸಿಬ್ಬಂದಿಯ ಮೇಲೆ ಅತಿಯಾದ ಕೆಲಸದ ಒತ್ತಡವನ್ನು ಉಂಟುಮಾಡಿತ್ತು. ಅಷ್ಟೇ ಅಲ್ಲದೆ, ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳ ಅಡ್ಮಿಷನ್ ಪ್ರಕ್ರಿಯೆಗಳೂ ಕೂಡ ಸಾಕಷ್ಟು ತಡವಾಗುತ್ತಿದ್ದವು. ಹೀಗಾಗಿ ಈ ಮೂರನೇ ಪರೀಕ್ಷೆಯ ಜಂಜಾಟಕ್ಕೆ ಇಲಾಖೆ ಬ್ರೇಕ್ ಹಾಕಿದೆ.

ಬೇಜವಾಬ್ದಾರಿತನಕ್ಕೆ ಜಾಗವಿಲ್ಲ

ಮೂರು ಬಾರಿ ಪರೀಕ್ಷೆ ಬರೆಯುವ ಅವಕಾಶವಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಸಿದ್ಧತೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಇನ್ಮುಂದೆ ಕೇವಲ ಎರಡು ಪರೀಕ್ಷೆಗಳು ಮಾತ್ರ ಇರುವುದರಿಂದ, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ಧಗೊಳಿಸುವಂತೆ ಶಾಲಾ-ಕಾಲೇಜುಗಳ ಶಿಕ್ಷಕರಿಗೂ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಾಸ್ ಆಗಲು ಮೂರು ಪರೀಕ್ಷೆಗಳು ನೆರವಾಗುತ್ತಿದ್ದವು ಎಂಬ ವಾದಗಳಿದ್ದರೂ, ಇಲಾಖೆಯು ಶೈಕ್ಷಣಿಕ ಹಿತದೃಷ್ಟಿಯಿಂದ ಎರಡೇ ಪರೀಕ್ಷೆಗಳನ್ನು ನಡೆಸಲು ಅಂತಿಮ ತೀರ್ಮಾನ ಮಾಡಿದೆ. ಈ ಹೊಸ ಪದ್ಧತಿಯು ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಎಂತಹ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Must Read