June 25, 2026
Thursday, June 25, 2026
spot_img

ಬಿಪಿ ಲೋ ಆಗಿ ಸ್ಟೇರಿಂಗ್ ಮೇಲೆಯೇ ಕುಸಿದ ಚಾಲಕ: ಡಿವೈಡರ್ ಏರಿ ನಿಂತ ಖಾಸಗಿ ಬಸ್, ತಪ್ಪಿದ ಭಾರೀ ಅನಾಹುತ

ಹೊಸದಿಗಂತ ವರದಿ ಉಳ್ಳಾಲ:

ಬಸ್ ಚಲಿಸುತ್ತಿದ್ದ ವೇಳೆ ಚಾಲಕನಿಗೆ ಬಿಪಿ ಲೋ ಆಗಿ ಅಸ್ವಸ್ಥತೆ ಉಂಟಾದ ಪರಿಣಾಮ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ಮಧ್ಯದ ಡಿವೈಡರ್ ಏರಿ ನಿಂತ ಘಟನೆ ಮಂಗಳವಾರ ಬೆಳಿಗ್ಗೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಮುಂಭಾಗದಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಮುಡಿಪು–ಸ್ಟೇಟ್ ಬ್ಯಾಂಕ್ ಮಾರ್ಗದಲ್ಲಿ ಸಂಚರಿಸುವ ‘ಗೋಪಾಲಕೃಷ್ಣ’ ಹೆಸರಿನ ಖಾಸಗಿ ಸರ್ವಿಸ್ ಬಸ್ ಮುಡಿಪುವಿನಿಂದ ದೇರಳಕಟ್ಟೆ ತಲುಪಿದ ವೇಳೆ ಈ ಘಟನೆ ನಡೆದಿದೆ. ಬಸ್ ಚಾಲಕ ಜನಾರ್ಧನ್ ಅವರಿಗೆ ಹಠಾತ್ ಬಿಪಿ ಲೋ ಆಗಿ ಸ್ಟೀರಿಂಗ್ ಮೇಲೆಯೇ ಕುಸಿದಿದ್ದಾರೆ ಎನ್ನಲಾಗಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಏರಿ ನಿಂತಿದೆ.

ಇದನ್ನೂ ಓದಿ:

ಘಟನೆಯ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಯೆನೆಪೋಯ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಯೂ-ಟರ್ನ್ ಪಡೆಯುವುದು ಸಾಮಾನ್ಯವಾಗಿದ್ದು, ಆ ಸಮಯದಲ್ಲಿ ಯಾವುದೇ ವಾಹನಗಳು ಎದುರಾಗದ ಕಾರಣ ಸಂಭವನೀಯ ಭಾರೀ ದುರಂತ ತಪ್ಪಿದಂತಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಚಾಲಕ ಜನಾರ್ಧನ್ ಅವರನ್ನು ತಕ್ಷಣವೇ ಸಮೀಪದ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !