ಹೊಸದಿಗಂತ ವರದಿ ಚಿತ್ರದುರ್ಗ:
ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿರುವ ಕಾರಣ ವಿದ್ಯುತ್ ಖಾಸಗೀಕರಣ ಮಾಡಲು ಮುಂದಾಗಿದೆ. ಕೋಟ್ಯಂತರ ರೂಪಾಯಿ ವಿದ್ಯುತ್ ಸಾಲವಾಗಿದೆ. ಇದನ್ನು ಸರಿದೂಗಿಸುವ ಸಲುವಾಗಿ ಸರ್ಕಾರ ಖಾಸಗೀಕರಣ ಮಾಡಿ ಓಡಿ ಹೋಗಲು ಹುನ್ನಾರ ನಡೆಸಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಖಾಸಗೀಕರಣ ಮಾಡುವ ಹುನ್ನಾರ ಸರ್ಕಾರದ ಮುಂದಿದೆ. ಸರ್ಕಾರ ಈಗಾಗಲೇ ಟಾಟಾ ಪವರ್ ಪರ್ಚೇಸಿಗೆ ಅರ್ಜಿಯನ್ನು ಆಹ್ವಾನಿಸಿತ್ತು. ದಯವಿಟ್ಟು ಯಾರೂ ಇದರಲ್ಲಿ ಭಾಗಿಯಾಗಬೇಡಿ. ವಿದ್ಯುತ್ ಖಾಸಗೀಕರಣವಾದಲ್ಲಿ ಮುಂದಿನ ದಿನಗಳಲ್ಲಿ ರೈತರ ಐಪಿ ಸೆಟ್‌ಗಳಿಗೆ ಬಿಲ್ ಬರುತ್ತವೆ. ಆ ಬಿಲ್ಲನ್ನು ತುಂಬಬೇಕಾದರೆ ರೈತರು ಹೊಲ ಮಾರಬೇಕಾಗುತ್ತದೆ. ಈ ಸರ್ಕಾರ ರಿಯಲ್ ಎಸ್ಟೇಟ್ ಕಡೆಗೆ ಗಮನ ಹರಿಸಿದೆ. ಇದನ್ನು ಎಲ್ಲಾ ಶಾಸಕರು ವಿರೋಧ ಮಾಡಬೇಕೆಂದು ಆಗ್ರಹಿಸಿದರು.
ಸರ್ಕಾರದ ಒಡೆತನದ ವಿದ್ಯುತ್ ಕಂಪನಿಗಳಿಗೆ ನೇಮಕಾತಿ ಮಾಡಿಕೊಂಡರೆ ಮೀಸಲಾತಿ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಖಾಸಗೀಕರಣ ಮಾಡಲು ಹೊರಟಿದೆ. ಇದು ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ಮಾಡುತ್ತಿರುವ ದ್ರೋಹ. ಹಾಗೆಯೇ ಸರ್ಕಾರ ಖಾಸಗಿ ಕಂಪನಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡು ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿರುವ ಕಾರಣ ವಿದ್ಯುತ್ ಖಾಸಗೀಕರಣ ಮಾಡಲು ಮುಂದಾಗಿದೆ. ಕೋಟಿಗಟ್ಟಲೆ ವಿದ್ಯುತ್ ಸಾಲ ಆಗಿದೆ. ಇದನ್ನು ಸರಿದೂಗಿಸುವ ಸಲುವಾಗಿ ಸರ್ಕಾರ ಖಾಸಗೀಕರಣ ಮಾಡಿ ಓಡಿ ಹೋಗಲು ಮುಂದಾಗಿದೆ ಎಂದು ದೂರಿದರು.
ಇದನ್ನೂ ಓದಿ:
ರಾಜ್ಯದಲ್ಲಿ ಬರ ಆವರಿಸಿದೆ. ಹಾಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡಲೇ ರಾಜ್ಯವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಹಾಗೆಯೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಬರ ಪರಿಹಾರಕ್ಕೆ 25 ಕೋಟಿ ರೂ. ಬಿಡುಗಡೆ ಮಾಡಬೇಕು. ಬರ ಅಧ್ಯಯನಕ್ಕೆ ಕೂಡಲೇ ಐಎಎಸ್ ಕೇಡರ್ ಅಧಿಕಾರಿಯನ್ನು ಪ್ರತಿ ಜಿಲ್ಲೆಗೆ ನೇಮಿಸಬೇಕು. ಆ ಮೂಲಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಇತರೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಉಪಾಧ್ಯಕ್ಷ ಡಾ.ಸಿದ್ದಾರ್ಥ ಗುಂಡಾರ್ಪಿ, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್, ಮಾಧುರಿ ಗೀರೀಶ್, ಮೋಹನ್ ಕುಮಾರ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಸಹ ವಕ್ತಾರ ನವೀನ್ ಚಾಲುಕ್ಯ, ಎಸ್.ಸಿ. ಮಾರ್ಚಾದ ಅಧ್ಯಕ್ಷ ಪರಶುರಾಮ್ ಉಪಸ್ಥಿತರಿದ್ದರು.



