June 24, 2026
Wednesday, June 24, 2026
spot_img

ಕಿತ್ತೂರದಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಕಾರ್ಮಿಕರ ದುರ್ಮ*ರಣ, ಚಾಲಕನ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಜಿಲ್ಲೆಯ ಕಿತ್ತೂರ ಪಟ್ಟಣದ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಕಿತ್ತೂರ ಪೊಲೀಸ್ ಠಾಣೆಯಲ್ಲಿ, ಉತ್ತರ ಪ್ರದೇಶ ಮೂಲದ ಅವನೀಶಕುಮಾರ ಮನಸಾರಾಮ (25) ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು. ಬುಧವಾರ ಬೆಳಗಿನ ಜಾವ ಸುಮಾರು 2 ಗಂಟೆ ವೇಳೆ ಬೆಳಗಾವಿಯಿಂದ ಧಾರವಾಡ ಕಡೆಗೆ ತೆರಳುತ್ತಿದ್ದ ಟಾಟಾ 709 ಮಿನಿ ಟ್ರಕ್ (ಕೆಎ-28 ಎಬಿ-2888) ಕಿತ್ತೂರ ಚನ್ನಮ್ಮ ವೃತ್ತದ ಸಮೀಪದ ಅಂಡರ್ಗ್ರೌಂಡ್ ಸೇತುವೆ ಬಳಿ ಅಪಘಾತಕ್ಕೀಡಾಗಿದೆ.

ಆರೋಪಿ ಟ್ರಕ್ ಚಾಲಕ ದುರ್ಗಪ್ಪ ಮಾರುತಿ ಗಾಡಿವಡ್ಡರ (ಚಡಚಣ, ವಿಜಯಪುರ ಜಿಲ್ಲೆ) ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಮೇಲೆ ಹತ್ತಿ ಎಡಭಾಗಕ್ಕೆ ಉರುಳಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ:

ಟ್ರಕ್ ನಲ್ಲಿ ಸಿಮೆಂಟ್ ಕಂಬಗಳನ್ನು ಸಾಗಿಸಲಾಗುತ್ತಿದ್ದು, ಅದರೊಂದಿಗೆ ಹಲವಾರು ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಅಪಘಾತದಲ್ಲಿ ಉತ್ತರ ಪ್ರದೇಶ ಮೂಲದ ಯುವಕರಿಗೆ ಗಾಯ ಕೆಲವರ ಸಾವು:

ಪವನಕುಮಾರ ಭೋಲನಾಥ (27)ಆದಿಲ್ ಅಲಿ ಶೌಕತ ಅಲಿ (24) ನಜೀರ್ ವಸೀಂ (19) ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ಇನ್ನೂ ಸೌರಭ್ ರಾಮಲಖನ್ ರಾವತ್ ಹಾಗೂ ಶಿವಮ್ ಕುಮಾರ್ ವೀರೇಂದ್ರ ಕುಮಾರ್ ಅವರಿಗೆ ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಎಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯ ಕುರಿತು ಕಿತ್ತೂರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 175/2026 ಅಡಿಯಲ್ಲಿ, ಬಿಎನ್ಎಸ್ ಕಲಂ 281, 125(ಬಿ) ಮತ್ತು 106(1)ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸರು ಆರೋಪಿತ ಚಾಲಕ ದುರ್ಗಪ್ಪ ಮಾರುತಿ ಗಾಡಿವಡ್ಡರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದು, ಅಪಘಾತದ ನಿಖರ ಕಾರಣಗಳ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !