June 27, 2026
Saturday, June 27, 2026
spot_img

ಇಡಿ ದಾಳಿ ರಾಜಕೀಯ ಪ್ರೇರಿತ ಅಲ್ಲ; ಉಸ್ತುವಾರಿ ಸಚಿವರ ನೇಮಕ ವಿಳಂಬಕ್ಕೆ ಸಂಪುಟ ವಿಸ್ತರಣೆಯೇ ಕಾರಣ: ಸಚಿವ ಸತೀಶ್ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌


ಬೆಳಗಾವಿ: ರಾಜ್ಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ವೈ. ಮಂಜುನಾಥ್ ಮೇಲಿನ ಇಡಿ ದಾಳಿ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಪ್ರೇರಿತ ಎಂದು ಹೇಳಲು ಸಾಧ್ಯವಿಲ್ಲ. ಇದರ ನಿಜವಾದ ಸತ್ಯಾಂಶ ಆರು ತಿಂಗಳ ಬಳಿಕ ಹೊರಬರಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.


ಶುಕ್ರವಾರ ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡಿ ದಾಳಿ ನಮಗೂ ಆತಂಕ ಮೂಡಿಸಿದೆ. ಬೆಳಗಾವಿ ಜಿಲ್ಲಾ ಅಬಕಾರಿ ಉಪ ಆಯುಕ್ತರಾಗಿದ್ದ, ಸದ್ಯ ಹೆಚ್ಚುವರಿ ಆಯುಕ್ತರಾಗಿರುವ ಡಾ. ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರುವುದು ನಿಜ. ಅವರು ನಮ್ಮ ಸಂಬಂಧಿಯೇ ಆಗಿದ್ದಾರೆ. ಭ್ರಷ್ಟಾಚಾರದ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಇಷ್ಟು ದೊಡ್ಡ ಅಧಿಕಾರಿಯ ಮೇಲೆ ಇಡಿ ದಾಳಿ ನಡೆಸಿರುವುದು ಇದೇ ಮೊದಲು. ಈ ಬೆಳವಣಿಗೆ ನಮಗೂ ಕೂಡ ಆತಂಕ ಮೂಡಿಸಿದೆ” ಎಂದರು.


ಈ ಹಿಂದೆ 2011 ರಲ್ಲಿ ಮಂಜುನಾಥ್ ಅವರ ಮೇಲೊಂದು ಪ್ರಕರಣ ದಾಖಲಾಗಿತ್ತು, ಆದರೆ ಅದು ಈಗಾಗಲೇ ರದ್ದಾಗಿದೆ. ಅಧಿಕಾರಿಗಳು ಯಾವ ಮಾಹಿತಿ ಪಡೆಯುತ್ತಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಕುರಿತು ನಾನು ಅವರ ಜೊತೆ ಮಾತನಾಡುತ್ತೇನೆ. ಅವರ ಕುಟುಂಬಸ್ಥರು ಕಳೆದ 30 ವರ್ಷಗಳಿಂದ ಮದ್ಯದ ಅಂಗಡಿ ವ್ಯವಹಾರದಲ್ಲಿದ್ದಾರೆ. ಈ ತನಿಖೆ ಕೇವಲ ಒಂದು ಇಲಾಖೆಗೆ ಸೀಮಿತವಾಗಿಲ್ಲ ಮತ್ತು ಇಷ್ಟಕ್ಕೇ ಮುಗಿಯುವುದಿಲ್ಲ” ಎಂದು ತಿಳಿಸಿದರು.


2028ರ ಚುನಾವಣೆ ಹತ್ತಿರ ಬಂದಾಗ ಇವೆಲ್ಲ ಸಹಜ ದಾಳಿಯ ಹಿಂದಿನ ರಾಜಕೀಯ ಆಯಾಮದ ಬಗ್ಗೆ ಮಾತನಾಡಿದ ಸಚಿವರು, “ನಮ್ಮನ್ನು ರಾಜಕೀಯವಾಗಿ ಕಟ್ಟಿಹಾಕಲು ಈ ದಾಳಿ ನಡೆಯುತ್ತಿದೆಯೇ ಎಂಬುದು ಈಗಲೇ ಗೊತ್ತಾಗುವುದಿಲ್ಲ. ಅದಕ್ಕೆ ಕನಿಷ್ಠ ಆರು ತಿಂಗಳು ಬೇಕು. ಸಾಮಾನ್ಯವಾಗಿ 2028ರ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಇಡಿ ದಾಳಿಗಳು ಆರಂಭವಾಗುವುದು ಸಹಜ” ಎಂದು ತಮ್ಮ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸಿದರು.


ಸಂಪುಟ ವಿಸ್ತರಣೆ ವಿಳಂಬ: ಉಸ್ತುವಾರಿ ಸಚಿವರ ಅಧಿಕೃತ ನೇಮಕ ಬಾಕಿ ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಸಚಿವರು, “ರಾಜ್ಯದಲ್ಲಿ ಇನ್ನು ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ. ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗಿದ್ದರಿಂದಲೇ ಸದ್ಯಕ್ಕೆ ನಮಗೆ ತಾತ್ಕಾಲಿಕವಾಗಿ ಉಸ್ತುವಾರಿ ಜವಾಬ್ದಾರಿ ನೀಡಿ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ:


ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಲು ಸಿದ್ದರಾಮಯ್ಯನವರು ಕಾರಣವೆಂದು ವಂದತಿ ಹರದಾಡುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರಣವಲ್ಲ. ಈಗಾಗಲೇ ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದೇನೆ. ಹೈಕಮಾಂಡ್ನ ‘ಒಬ್ಬರಿಗೆ ಒಂದೇ ಹುದ್ದೆ’ ಎಂಬ ಕಟ್ಟುನಿಟ್ಟಿನ ನಿಯಮದ ಅನ್ವಯವೇ ಈ ತೀರ್ಮಾನವಾಗಿದೆ” ಎಂದು ಸಚಿವರು ವಿವರಿಸಿದರು.


“ಕಳೆದ ಎರಡು ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಸಚಿವ ಸ್ಥಾನದ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ನಮಗೆ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಪಕ್ಷದ ನಿಯಮದ ಪ್ರಕಾರ ಒಂದೇ ಹುದ್ದೆ ನಿಭಾಯಿಸಬೇಕಿದ್ದರಿಂದ, ನಾನು ಅಂತಿಮವಾಗಿ ಸಚಿವ ಸ್ಥಾನದಲ್ಲೇ ಮುಂದುವರಿಯಲು ನಿರ್ಧರಿಸಿ ಅಧ್ಯಕ್ಷ ಸ್ಥಾನದ ರೇಸ್ನಿಂದ ಹಿಂದೆ ಸರಿದೆ” ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !